ಕೋವಿಡ್ ಲಸಿಕಾ ಮೇಳ : ಗುರಿ ಸಾಧಿಸಿ ಗೆಲುವು ಪಡೆದ ತಾಲ್ಲೂಕು ಆಡಳಿತ
ಚಿಕ್ಕನಾಯಕನಹಳ್ಳಿ :ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ತಾಲ್ಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕೋವಿಡ್ಲಸಿಕಾ ಮೇಳ ಯಶಸ್ವಿಯಾಗಿದ್ದು 12 ಸಾವಿರಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಿ ಪಡೆದಿದ್ದ ಗುರಿಯನ್ನು ಸಾಧಿಸಿ ತಾಲ್ಲೂಕು ಆಡಳಿತ ಗೆದ್ದಿದೆ.
ರಾತ್ರಿ 8 ಗಂಟೆಯವರೆಗೆ ಲಭ್ಯವಾದ ಮಾಹಿತಿ ಪ್ರಕಾರ 12,754 ಮಂದಿಗೆ ಲಸಿಕೆ ಹಾಕಲಾಗಿದೆ. 18 ವರ್ಷ ಕ್ಕಿಂತ ಹೆಚ್ಚು ವಯಸ್ಸಿನ ಎಲ್ಲಾರಿಗೂ ಲಸಿಕೆ ಹಾಕಲು ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿತ್ತು. ಪುರುಷರು, ಮಹಿಳೆಯರು ಲಸಿಕೆ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಲಸಿಕೆ ಹಾಕಿಸಿಕೊಂಡರು. ಪುರಸಭಾ ವ್ಯಾಪ್ತಿಯಲ್ಲಿ ಎನ್‌ಜಿಓ ಬಿಲ್ಡಿಂಗ್, ಜೋಗಿಹಳ್ಳಿ ಅಂಗನವಾಡಿ ಕೇಂದ್ರ, ಧರ್ಮಸ್ಥಳ ಕಚೇರಿ, ನೂರಾನಿ ಮಸೀದಿ, ರೇವಣಪ್ಪನ ಮಠ, ಮಾರುತಿ ನಗರ, ಕೇದಿಗೆ ಹಳ್ಳಿ, ರಂಗಮ0ದಿರ ಸೇರಿದಂತೆ ತಾಲ್ಲೂಕಿನ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರ ಹಾಗು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನ ಮಂಡಲ ಅಧಿವೇಶನದಲ್ಲಿ ಅತ್ಯಂತ ಹೆಚ್ಚು ಕ್ರಿಯಾಶೀಲರಾಗಿದ್ದರೂ ಬಿಡುವಿನ ವೇಳೆಯಲ್ಲಿ ಅಧಿಕಾರಿ ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿ ಮೇಳದ ಯಶಸ್ಸಿಗೆ ಕಾರಣಿಭೂತರಾಗಿದ್ದಾರೆ. ಕೋವಿಡ್ ಲಸಿಕಾ ಮೇಳ ಯಶಸ್ವಿಯಾಗಿದ್ದು ಶೇ.೧೧೫ ರಷ್ಟು ಪ್ರಗತಿ ಸಾಧಿಸಿದ್ದೇವೆ. ನಗರ ಹಾಗು ಗ್ರಾಮೀಣ ಭಾಗದಲ್ಲಿ ಜನರು ಲಸಿಕೆ ಪಡೆಯಲು ಸ್ವಯಂ ಪ್ರೇರಿತರಾಗಿ ಬಂದಿದ್ದಾರೆ ಎಂದು ತಹಸೀಲ್ದಾರ್ ತೇಜಸ್ವಿನಿ ಹೇಳಿದರು.
ಜನರಲ್ಲಿ ಈ ಹಿಂದೆ ಲಸಿಕೆ ಬಗ್ಗೆ ಗೊಂದಲ ತಪ್ಪು ಕಲ್ಪನೆ ಮನೆ ಮಾಡಿತ್ತು ಆದರೆ ಇಂದು ಲಸಿಕೆಯ ಮಹತ್ವ ತಿಳಿದು ಜನರು ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ ಲಸಿಕೆ ನೀಡಲಾಗುತ್ತಿದೆ ಎಂದು ಲಸಿಕಾ ಮೇಳದ ನೋಡಲ್ ಅಧಿಕಾರಿಗಳಾದ ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಹಂಸವಿ ಹಾಗು ಸಿಡಿಪಿಓ ಹೊನ್ನಪ್ಪ ತಿಳಿಸಿದರು.
ಮೇಳದ ಯಶಸ್ಸಿಗೆ ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರು ಹಾಗು ಆರೋಗ್ಯ ಇಲಾಖೆ ಸಿಬ್ಬಂದಿಗಳ ಸೇವೆ ಅನನ್ಯವಾದುದು ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯ ಮೇಲ್ವಿಚಾರಕಿ ರೇಖಾ ಪ್ರಶಂಸೆ ವ್ಯಕ್ತಪಡಿಸಿದರು. ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್, ಹುಳಿಯಾರಿನ ಮಂಜುನಾಥ್, ಉಪ ತಹಸೀಲ್ದಾರ್‌ಗಳಾದ ಪುಷ್ಪಾವತಿ, ಸುಧಾ, ಕಾವ್ಯಶ್ರೀ, ಪಶುಪಾಲನೆ ಇಲಾಖೆಯ ನಾಗಭೂಷಣ್, ಲೋಕೋಪಯೋಗಿ ಇಲಾಖೆಯ ಚಂದ್ರಶೇಖರ್, ಆಹಾರ ಶಿರಸ್ತೇದಾರ್ ಕಿರಣ್ ಕುಮಾರ್, ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರಾ.ಪಂ ಸದಸ್ಯರು, ಪಿಡಿಓ, ಗ್ರಾಮ ಲೆಕ್ಕಿಗರು, ಪಟ್ಟಣದಲ್ಲಿ ಪುರಸಭಾ ಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ.