ಹಾರಕನಾಳು ಗ್ರಾ.ಪಂ ಅವಿಶ್ವಾಸ ಗೊತ್ತುವಳಿ ಸಭೆ: ಕಾಂಗ್ರೆಸ್ ಸದಸ್ಯರಲ್ಲೇ ಭಿನ್ನಮತ ಸ್ಪೋಟ
ಹರಪನಹಳ್ಳಿ:ತಾಲೂಕಿನ ಹಾರಕನಾಳು ಗ್ರಾಮ ಪಂಚಾಯ್ತಿಯ ಅವಿಶ್ವಾಸ ಗೊತ್ತುವಳಿ ಸಭೆ ರದ್ದಾಗಲು ಕಾಂಗ್ರೆಸ್ ಭಿನ್ನಮತ ಸ್ಪೋಟ ಹಾಗೂ ಶಾಸಕ ಜಿ.ಕರುಣಾಕರರೆಡ್ಡಿ ಅವರೇ ಕಾರಣ ಎಂದು ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷೆ ಎಲ್.ಸಾವಿತ್ರಿ ಶಶಿಕುಮಾರ್ ನಾಯ್ಕ್ ಆರೋಪ ಮಾಡಿದ್ದಾರೆ.
ಈ ಕುರಿತು ಗ್ರಾ.ಪಂ.ಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ ಹದಿನೈದು ದಿನಗಳ ಹಿಂದೆ ನನ್ನ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸುವಂತೆ ಸದಸ್ಯರು ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಅದರಂತೆ ಉಪವಿಭಾಗಾಧಿಕಾರಿಗಳು ಸೆ.೨೨ರ ಬೆಳಿಗ್ಗೆ ೧೧ ಗಂಟೆಗೆ ಸಮಯವನ್ನು ನಿಗದಿಪಡಿಸಿ ಅವಿಶ್ವಾಸ ಸಭೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು ಆದರೆ ಇಂದು ಬೆಳಿಗ್ಗೆ ದಿಢೀರನೆ ೧೦.೩೦ರ ವೇಳೆಗೆ ಯಾವುದೇ ನೋಟೀಸ್ ನೀಡದೇ ವಾಟ್ಸ್ ಆಪ್ ಮೆಸೆಜ್ ಮೂಲಕ ಉಪವಿಭಾಗಾಧಿಕಾರಿ ಏಕಾಏಕಿ ಅನಾರೋಗ್ಯದ ನೆಪವೋಡ್ಡಿ ಅವಿಶ್ವಾಸ ಸಭೆಯನ್ನು ರದ್ದುಗೊಳಿಸಿದ್ದಾರೆ ಎಂದರು.
ಇ0ದು ನಡೆಯುತ್ತಿದ್ದ ಅವಿಶ್ವಾಸ ಗೊತ್ತುವಳಿ ಸಭೆಯಲ್ಲಿ ಒಟ್ಟು ೨೩ ಸದಸ್ಯರ ಪೈಕಿ ೧೨ ಸದಸ್ಯರ ಬಲದಿಂದ ಅವಿಶ್ವಾಸ ಗೊತ್ತುವಳಿ ಸಭೆಯಲ್ಲಿ ನನಗೆ ಜಯ ಸಿಗುತ್ತಿತ್ತು ಇದನ್ನ ಮನಗಂಡ ಶಾಸಕ ಜಿ.ಕರುಣಾಕರರೆಡ್ಡಿ ಅವರು ನಾನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎನ್ನುವ ಕಾರಣಕ್ಕೆ ಅಧಿಕಾರಿಗಳ ಮೇಲೆ ತಮ್ಮ ಪ್ರಭಾವ ಬೀರಿ ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.
ಈ ವೇಳೆ ಕೆಪಿಸಿಸಿ ಓಬಿಸಿ ಘಟಕದ ರಾಜ್ಯ ಕಾರ್ಯದರ್ಶಿ ಶೃಂಗಾರತೋಟ ಬಸವರಾಜ್ ಮಾತನಾಡಿ ಶಾಸಕ ಜಿ.ಕರುಣಾಕರರೆಡ್ಡಿ ಅವರು ಹಾರಕನಾಳು ಸೇರಿದಂತೆ ತಾಲೂಕಿನ ಇತರ ಗ್ರಾ.ಪಂಗಳಲ್ಲಿ ಹಿಡಿತ ಸಾಧಿಸಲು ಅಧಿಕಾರಿಗಳ ಮೇಲೆ ಪ್ರಭಾವ ಭೀರಿ ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿಯಲು ಮುಂದಾಗಿರುವುದು ಸಲ್ಲದು ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಯೇ ಈ ಪಂಚಾಯ್ತಿಯ ಗದ್ದುಗೆ ಏರುವುದು ಖಚಿತ ಎಂದರು.
ವಿರೇಶ್‌ನಾಯ್ಕ್ ಮಾತನಾಡಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಬರವಣಿಗೆ ಮೂಲಕ ನೋಟೀಸ್ ನೀಡದೆ ಏಕಾಏಕಿ ವಾಟ್ಸ್ ಆಪ್ ಮೂಲಕ ಸಂದೇಶ ರವಾನಿಸಿ ಉಪವಿಭಾಗಾಧಿಕಾರಿಗಳು ಅನಾರೋಗ್ಯದ ಹಿನ್ನೆಲೆ ಸಭೆ ಮುಂದೂಡಲಾಗಿದೆ ಎಂದು ತಿಳಿಸಿದರು ಇದನ್ನೆಲ್ಲಾ ಗಮನಿಸಿದರೆ ಕಾಂಗ್ರೆಸ್ ಬೆಂಬಲಿ ಅಭ್ಯರ್ಥಿ ಅಧ್ಯಕ್ಷರಾಗುತ್ತಾರೆ ಎಂಬ ಕಾರಣಕ್ಕೆ ಶಾಸಕರು ಅಧಿಕಾರಿಗಳ ಮೇಲೆ ಪ್ರಭಾವ ಭೀರಿರುವುದ ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಆರ್. ಶಶಿಕುಮಾರ್ ನಾಯ್ಕ್ ಪೂಜಾರ್, ವಿ. ಮಲ್ಲೇಶ್ ನಾಯ್ಕ್, ಪ್ರಕಾಶ್ ನಾಯ್ಕ್, ಶಿವಯೋಗಿ ಕೊಟ್ರೇಶ್, ಹರ‍್ಯಾನಾಯ್ಕ್, ಸೇರಿದಂತೆ ಮತ್ತಿತರರು ಇದ್ದರು.