ಭಾರತ್ ಬಂದ್: ಕುರುಬೂರು ಶಾಂತಕುಮಾರ್, ನಾರಾಯಣ ರೆಡ್ಡಿ, 100 ಕ್ಕೂ ಹೆಚ್ಚು ರೈತರ ಬಂಧನ, ಬಿಡುಗಡೆ
ಬೆಂಗಳೂರು:ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕರೆ ನೀಡಲಾಗಿದ್ದ ಭಾರತ್ ಬಂದ್ ಬೆಂಬಲಿಸಲು ಎಲ್ಲಾ ಸಂಘಸಂಸ್ಥೆಗಳ ಮುಖಂಡರ ಜೊತೆ ಬೆಳಗ್ಗೆ 9 ಸಮಯದಲ್ಲಿ ಬೆಂಗಳೂರಿನ ಮೌರ್ಯ ಸರ್ಕಲ್ನಲ್ಲಿ ಒಂದುಗೂಡಿ ವಿನೂತನ ರೀತಿಯ ಮೆರವಣಿಗೆ ನಡೆಸಲು ಯತ್ನಿಸಿದ ರೈತ ಮುಖಂಡರನ್ನು ಬಂಧಿಸಲು ಯತ್ನಿಸಿದಾಗ ಪೊಲೀಸರ ನಡುವೆ ಭಾರಿ ವಾಗ್ವಾದ ನಡೆಯಿತು.
ಏಕೆ ಬಂಧನ ಮಾಡುತ್ತೀರಿ, ನಾವು ಮೆರವಣಿಗೆಯನ್ನೇ ಆರಂಭಿಸಿಲ್ಲ,ನಮ್ಮ ರೈತರು ಬರುತ್ತಿದ್ದಾರೆ. ಅಲ್ಲಿ ತನಕ ಊರಿನಿಂದ ತಂದಿರುವ ತಿಂಡಿಯನ್ನು ತಿಂದು ಮುಂದೆ ಸಾಗುತ್ತೇವೆ ಎಂದರೂ ಬಿಡದೆ ಪೊಲೀಸರು ಯಾವುದೇ ಪ್ರತಿ ಉತ್ತರ ನೀಡದೆ ಬಲಾತ್ಕಾರವಾಗಿ ಬಂಧಿಸಿದರು.
ಆಗ ಕುರುಬೂರು ಶಾಂತಕುಮಾರ್ ಪೊಲೀಸರ ನಡೆಯನ್ನ ಖಂಡಿಸಿ ಕಾನೂನುಬಾಹಿರ ಕ್ರಮಗಳನ್ನ ಕೈಗೊಳ್ಳುತ್ತಿರುವುದು ಪೊಲೀಸರ ಸರ್ವಾಧಿಕಾರಿ ಧೋರಣೆ ಯಾಗಿದೆ ಇದನ್ನು ನಾವು ಸಹಿಸಲು ಸಾಧ್ಯವಿಲ್ಲ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಕೇಂದ್ರದ ಕೆಲವು ಮಂತ್ರಿಗಳು ರೈತ ಚಳುವಳಿಯ ಬಗ್ಗೆ ಹಗುರವಾಗಿ ಕೋಲೆ ಬಸವನ ರೀತಿ ಮಾತನಾಡುತ್ತಿದ್ದಾರೆ. ಇವರಿಗೆ ಕೃಷಿ ಕಾಯ್ದೆಗಳ ದುಷ್ಪರಿಣಾಮಗಳ ಬಗ್ಗೆ ಅರಿವೇ ಇಲ್ಲ ಬೇಕಿದ್ದರೆ ರೈತ ಮುಖಂಡರ ಸಭೆ ಕರೆದು ಚರ್ಚಿಸಲಿ ಎಂದು ಬಹಿರಂಗ ಸವಾಲು ಹಾಕಿದರು ರೈತರು ಉತ್ಪನ್ನಗಳನ್ನ ಎಲ್ಲಿ ಬೇಕಾದರೂ ಯಾರಿಗಾದರೂ ಮಾರಾಟ ಮಾಡಬಹುದು ಎನ್ನುತ್ತಾರೆ.
ನಾವು ವಿಧಾನಸೌಧಕ್ಕೆ ಹಣ್ಣು ತರಕಾರಿಗಳನ್ನ ಮಾರಲು ಹೋಗುತ್ತಿದ್ದರೆ ಪೊಲೀಸರೇ ತಡೆಯುತ್ತಿದ್ದಾರೆ ಇಂತಹ ನಡೆ ರೈತರ ಕಣ್ಣಿಗೆ ಮಣ್ಣೆರಚುವ ಕೇಂದ್ರ ಸರ್ಕಾರದ ಕುತಂತ್ರವಲ್ಲವೇ, ವಿಧಾನಸೌಧ ಬಳಿ ಎತ್ತಿನಗಾಡಿ ಕುದುರೆಗಾಡಿ ಪ್ರತಿಭಟನೆ ನಡೆಸುವಾಗ ಯಾವುದನ್ನು ಕೇಳದ ಅನುಮತಿಯನ್ನು ಪಡೆಯದ, ಪೊಲೀಸರು ನಮ್ಮನ್ನ ಮಾತ್ರ ಅನುಮತಿ ಪಡೆಯಲಾಗಿದೆಯೇ ಎಂದು ಕೇಳುತ್ತಾರೆ ಇದು ಪೊಲೀಸರ ಕಾರ್ಯವೈಖರಿ ಆಗಿದೆ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಗಂಭೀರ ಪರಿಣಾಮವನ್ನ ಎದುರಿಸಬೇಕಾಗುತ್ತದೆ ನವೆಂಬರ್ 26 ಕ್ಕೆ ಒಂದು ವರ್ಷ ತುಂಬುತ್ತದೆ ಆಗ ದೇಶದ ಎಲ್ಲಾ ರಾಜ್ಯಗಳಿಂದ 5 ಕೋಟಿಗೂ ಹೆಚ್ಚು ರೈತರು ದೆಹಲಿ ಪ್ರವೇಶ ಮಾಡುತ್ತೇವೆ ಸರ್ಕಾರದ ಯಾವುದೇ ಕುತಂತ್ರದ ಕಾರ್ಯತಂತ್ರ ಗಳಿಗೂ ಬಗ್ಗುವುದಿಲ್ಲ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ನಾರಾಯಣ ರೆಡ್ಡಿ ಮಾತನಾಡಿ, ರೈತರು ಕರೆ ನೀಡಿರುವ ಭಾರತ್ ಬಂದ್ ವಿಫಲಗೊಳಿಸಲು ಸರ್ಕಾರ ಪೊಲೀಸ್ ಬಲದ ಮೂಲಕ ಯತ್ನಿಸುತ್ತಿದೆ ಪೊಲೀಸರು ಕಾನೂನು ಪಾಲಕರಾಗದೇ ಮಂತ್ರಿಗಳ ಗುಲಾಮರ ರೀತಿ ನಡೆದುಕೊಳ್ಳುತ್ತಿದ್ದಾರೆ ಇದು ಸರಿಯಾದ ಕ್ರಮ ಅಲ್ಲ ಎಂದರು. ನೂರಕ್ಕೂ ಹೆಚ್ಚು ರೈತರನ್ನ ಆಡುಗೋಡಿ ಪೊಲೀಸ್ ಮೈದಾನಕ್ಕೆ ಕರೆದೊಯ್ದಾಗ ಅಲ್ಲಿ ರೈತರು 1 ಗಂಟೆ ಕಾಲ ಬಸ್ಸಿನಿಂದ ಕೆಳಗೆ ಇಳಿಯದೆ ಪೊಲೀಸರ ಕಾನೂನುಬಾಹಿರ ವರ್ತನೆಯನ್ನ ಖಂಡಿಸಿದರು. 3 ಗಂಟೆ ನಂತರ ಬಂಧಿತ ರೈತರು ರೈತ ಮಹಿಳೆಯರು ಬೀದಿ ಬದಿ ವ್ಯಾಪಾರಿಗಳನ್ನು ಬಿಡುಗಡೆಗೊಳಿಸಿದರು ಪ್ರತಿಭಟನೆಯಲ್ಲಿ ಬಂಧಿತರಾದ ಅಂದಪ್ಪ ಕೊಳೂರ, ಬೆಂಗಳೂರು ನಗರಾಧ್ಯಕ್ಷೆ ಶಿವಮ್ಮ, ಚನ್ನರಾಯಪಟ್ಟಣದ ಪ್ರೇಮ, ಮೈಸೂರು ಜಿಲ್ಲೆಯ ನಾಗರಾಜ್ ಪ್ರಜಾ ಪರಿವರ್ತನಾ ವೇದಿಕೆಯ ಗೋವಿಂದರಾಜು ಹೆಸರಘಟ್ಟ, ಶಿವರುದ್ರಪ್ಪ ಇನ್ನು ಮುಂತಾದವರು ಇದ್ದರು.