ಸಂವಿಧಾನದ ಮಹತ್ವ ಅರಿಯಿರಿ: ಬಸವರಾಜ ಕರಜಗಿ
ಚಡಚಣ:ಪ್ರತಿಯೊಬ್ಬರಲ್ಲಿಯೂ ಕಾನೂನಿನ ಪ್ರಜ್ಞೆ ಇರಬೇಕು. ಕಾನೂನು ಇಲ್ಲದ ಸಮಾಜ ಊಹಿಸಿ ಕೊಳ್ಳುವುದು ಅಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಸಂವಿಧಾನ ಪ್ರಸ್ತಾವನೆಯನ್ನು ತಿಳಿದುಕೊಳ್ಳಬೇಕು. ರಾಷ್ಟ್ರದ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಕನ್ನಡ ಶಿಕ್ಷಕ ಬಸವರಾಜ ಕರಜಗಿ ಹೇಳಿದರು.
ಇಂದು ಚಡಚಣ ಮರಡಿಯ ಎಚ್ ಪಿ ಎಸ್ ನಂ-2 ಶಾಲೆಯಲ್ಲಿ ಸಂವಿಧಾನ ದಿನ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಭಾರತದ ಸಂವಿಧಾನದ ಪ್ರಸ್ತಾವನೆ ಭಾರತದ ಧ್ಯೇಯೋದ್ದೇಶಗಳನ್ನು ಹಾಗೂ ನೀತಿ ನಿಲುವುಗಳನ್ನು ಸ್ಪಷ್ಟವಾಗಿ ತಿಳಿಯಪಡಿಸುತ್ತದೆ. ಇದು ರಾಷ್ಟ್ರದ ಮೂಲಭೂತ ಮೌಲ್ಯಗಳನ್ನು, ತತ್ವಗಳನ್ನು, ಸಂವಿಧಾನ ಕರ್ತೃಗಳು ಸಾಧಿಸಬೇಕೆಂದು ಬಯಸಿದ ಉದ್ದೇಶಗಳನ್ನು ಅಂತರ್ಗತವಾಗಿಸಿ ಕೊಂಡಿದೆ ಎಂದು ಹೇಳಿದರು.
ಇಂಗ್ಲೀಷ ಶಿಕ್ಷಕ ಜಗದೀಶ ಚಲವಾದಿ ಮಾತನಾಡಿ, ಸಂವಿಧಾನದಲ್ಲಿ ಕೊಡಲಾಗಿರುವ ಮೂಲಭೂತ ಹಕ್ಕುಗಳು ರಾಷ್ಟ್ರದ ಧ್ಯೇಯೋದ್ದೇಶಗಳನ್ನು ಸಾಧಿಸುವು ದಕ್ಕೆ ಸಹಕಾರಿ. ಎಲ್ಲಿ ವ್ಯಕ್ತಿ ನಿರ್ಭಯನಾಗಿ, ಮುಕ್ತವಾಗಿ ತನ್ನ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳಲು ಸಾಧ್ಯವಾಗುವಂಥ ವಾತಾವರಣವಿರುತ್ತದೆಯೋ ಅಲ್ಲಿ ಮಾತ್ರ ಸಂಪೂರ್ಣ ವ್ಯಕ್ತಿತ್ವ ಅರಳಲು ಸಾಧ್ಯ ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಿವೃತ್ತ ಶಿಕ್ಷಕ ಉಮದಿ ಅವರು ಶಾಲೆಗೆ 10,000 ರೂ. ಗಳನ್ನು ದೇಣಿಗೆ ನೀಡಿದರು,ಅದರ ಬಡ್ಡಿಯ ರೂಪದ ಹಣದಲ್ಲಿ 4,5,6 ನೇ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ರೂಪದಲ್ಲಿ ನೀಡಿದರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.ಶಿಕ್ಷಕರಾದ ಎಂ ಡಿ ಆದಿಗೊಂಡೆ, ಎಂ ಎಸ್ ನಿಂಬಾಳಕರ, ಆರ್ ವಾಯ್ ಗೌರ ಉಪಸ್ಥಿತರಿದ್ದರು. ವ್ಹಿ ಎಸ್ ಪತ್ತಾರ ಸ್ವಾಗತಿಸಿದರು.ಎಂ ಎಸ್ ದೊಡಮನಿ ನಿರೂಪಿಸಿದರು.ಜಯಶ್ರೀ ಗೊಟ್ಯಾಳ ವಂದಿಸಿದರು.