ಮೌಲ್ಯಯುತ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿ: ಬಿರಾದಾರ
ಚಡಚಣ:ಶಿಕ್ಷಕರು ವಿದ್ಯಾರ್ಥಿಗಳಿಗೆ ಎಲ್ಲವನ್ನು ಕಲಿಸುವವರಾಗಿರಬೇಕು, ಮಕ್ಕಳಿಗೆ ಕೇವಲ ಪುಸ್ತಕದಲ್ಲಿ ಇರುವ ಜ್ಞಾನವಲ್ಲದೆ ಸಮಾಜದ ನಿಜವಾದ ಅರಿವು ಮೂಡಿಸುವವರಾಗಿರಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಬಿ ಬಿ ಬಿರಾದಾರ ಹೇಳಿದರು.
ಅವರು ಇಂದು ಚಡಚಣ ಮರಡಿಯ ಎಚ್ ಪಿ ಎಸ್ ನಂ-2 ಶಾಲೆಯಲ್ಲಿ ಶಿಕ್ಷಕರ ಸ್ವಾಗತ ಹಾಗೂ ಬೀಳ್ಕೊಡುವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಥಿಗೆ ಪ್ರೇರಣೆಯಾಗುವ, ಸ್ಫೂರ್ತಿ ತುಂಬಿಸುವ ತಾಕತ್ತು ಶಿಕ್ಷಕನಲ್ಲಿರಬೇಕು, ಮಕ್ಕಳ ಮೇಲೆ ಆತನ ವ್ಯಕ್ತಿತ್ವ, ಮಾತು, ನಡೆ – ನುಡಿ ತುಂಬಾನೇ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಶಾಲೆಗೆ ನಿಯೋಜಿತಗೊಂಡ ಶಿಕ್ಷಕ ಬಸವರಾಜ ಕರಜಗಿ ಮಾತನಾಡಿ,ದೇಶದ ಭವಿಷ್ಯವನ್ನು ರೂಪಿಸುವ ಶಿಕ್ಷಕ ಶಿಸ್ತಿನ ಮತ್ತು ಮೌಲ್ಯಯುತ ಶಿಕ್ಷಣಕ್ಕೆ ದಾರಿ ಯಾಗಬೇಕು. ತಂದೆ ತಾಯಿ, ಸ್ನೇಹಿತರು, ಬಂಧುಬಳಗದವರು ಒಬ್ಬ ವ್ಯಕ್ತಿ ಹೊಟ್ಟೆ ಹಸಿವು ಎಂದಾಗ ಊಟ ಕೊಡುವುದಾದರೆ , ಅದೇ ಒಬ್ಬ ಆದರ್ಶ ಶಿಕ್ಷಕನಾದವನು ಅದನ್ನು ಸಂಪಾದಿಸುವ ಮಾರ್ಗವನ್ನು ತೋರಿಸಬೇಕು ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತನ್ನ ಕೆಲಸದ ಮೇಲೆ ಶ್ರದ್ಧೆ , ಪ್ರೀತಿ ಇದ್ದು ಮಕ್ಕಳ ಜೊತೆ ಮಕ್ಕಳಾಗಿ ತಾನು ಕಲಿಯುವ ವಿನಮ್ರತೆ ಇರುವವ , ಅವನು ನಿಜವಾದ ಆದರ್ಶ ಶಿಕ್ಷಕ ಎಂದು ಹೇಳಿದರು.
ಮಕ್ಕಳು ಹಾಗೂ ಶಾಲಾ ಶಿಕ್ಷಕರಾದ ಜಗದೀಶ ಚಲವಾದಿ,ವಿ ಎಸ್ ಪತ್ತಾರ ಅನಿಸಿಕೆಗಳನ್ನು ಹಂಚಿಕೊಂಡರು.ಇದೇ ಸಂದರ್ಭದಲ್ಲಿ ಬಸವರಾಜ ಕರಜಗಿ ಅವರನ್ನು ಶಾಲೆಗೆ ಸ್ವಾಗತಿಸಿಕೊಂಡು,ಸಂಗಮ್ಮ ಪೂಜಾರಿ ಅವರನ್ನು ಬೀಳ್ಕೊಡಲಾಯಿತು. ಆರ್ ವೈ ಗೌರ ಸ್ವಾಗತಿಸಿದರು.ಎಂ ಎಸ್ ದೊಡಮನಿ ನಿರೂಪಿಸಿ ದರು. ಜಯಶ್ರೀ ಗೋಟ್ಯಾಳ ವಂದಿಸಿದರು.