ವಿದ್ಯಾರ್ಥಿಗಳಲ್ಲಿನ ಚಿಂತನಶೀಲತೆಯನ್ನು ಬೆಳೆಸಿ: ವಸಂತ ರಾಥೋಡ್
ಇಂಡಿ:ವಿದ್ಯಾರ್ಥಿಗಳಲ್ಲಿನ ಚಿಂತನಶೀಲತೆಯನ್ನು ಬೆಳೆಸಿ, ಸೃಜನಶೀಲ ಅಭಿವ್ಯಕ್ತಿ ಮತ್ತು ಜ್ಞಾನವನ್ನು ಜಾಗೃತಿಗೊಳಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ ವಾಗಿದೆ. ಇದರ ಫಲಿತಾಂಶ ನಮ್ಮ ಜೀವನದ ಪ್ರತಿ ಹೆಜ್ಜೆ, ತೀರ್ಮಾನದಲ್ಲೂ ಪ್ರತಿಫಲಿಸಿ ಉತ್ತಮ ಮಾರ್ಗ ಕಂಡುಕೊಳ್ಳುವಲ್ಲಿ  ಸಹಾಯಕ ವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಸಂತ ರಾಠೋಡ ಹೇಳಿದರು.
ಅವರು ತಾಲೂಕಿನ ತಡವಲಗಾ ಗ್ರಾಮದ ಕೆಬಿಎಂಪಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಶಿಕ್ಷಕರ ಬೀಳ್ಕೊಡುಗೆ ಸಮಾರಂಭದ ಉದ್ಘಾಟಕರಾಗಿ ಮಾತನಾಡಿದರು. ಶಿಕ್ಷಕರು ಸದೃಢ ಸಮಾಜ ನಿರ್ಮಿಸುವಲ್ಲಿ ಮೌಲ್ಯಯುತ ವಾದ ಪರಿಶ್ರಮದ ಅಡಿಪಾಯದ ಅಗತ್ಯವನ್ನು ಮಕ್ಕಳಲ್ಲಿ ಮೂಡಿಸಿ, ಬೆಳೆಸುವ ಕಾರ್ಯದೊಂದಿಗೆ, ವಿದ್ಯಾರ್ಥಿ ಗಳಿಗೆ ನೀತಿಯುತ ಪ್ರಜ್ಞೆ , ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುತ್ತಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಹಿರೇರೂಗಿಯ ಯುಬಿಎಸ್ ಶಾಲೆಯ ಇಂಗ್ಲೀಷ ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಶಿಕ್ಷಕ ವ್ಯಕ್ತಿಯಲ್ಲ, ಶಕ್ತಿ. ದೇಶದ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಗಾಧವಾದುದು. ಶಿಕ್ಷಕನಾದವನು ಕೇವಲ ಬೋಧಕನಲ್ಲ, ಅದರ ಜೊತೆಗೆ ಅವನೊಬ್ಬ ಸಮಾಜದ ಮಹಾನ್ ಶಕ್ತಿ ಯಾಗಿದ್ದಾನೆ. ಮನುಷ್ಯನ ಜೀವನದಲ್ಲಿ ತಾಯಿ ಮೊದಲನೇ ಶಕ್ತಿ, ಶಿಕ್ಷಕ ಎರಡನೇ ಶಕ್ತಿ ಎಂದು ಅಭಿಪ್ರಾಯಪಟ್ಟರು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ ತಾರಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಭದ್ರ-ಸುಂದರ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಸ್ತು, ವಿದ್ಯೆ, ವಿನಯ ಇವುಗಳು ಇಂದಿನ ವಿದ್ಯಾರ್ಥಿಗಳಲ್ಲಿ ಇರಬೇಕಾದ ಅತ್ಯಂತ ಮೌಲ್ಯಯುತ ಗುಣಗಳಾಗಿವೆ ಎಂದರು. ಬೇರೆ ಶಾಲೆಗೆ ವರ್ಗಾವಣೆ ಗೊಂಡ ಜೆ ಸಿ ಗುಣಕಿ, ತಿಪ್ಪಣ್ಣ ಜಂಬಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಶಾಲಾ ಮುಖ್ಯ ಶಿಕ್ಷಕ ಎಂ ಎನ್ ಚಲವಾದಿ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ರೂಪಾ ಬ್ಯಾಳಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಜೆ ಸಿ ಗುಣಕಿ, ಟಿ ಕೆ ಜಂಬಗಿ, ಎಸ್ ಸಿ ಗಿಡಗಂಟಿ ಅವರನ್ನು ಸನ್ಮಾನಿಸಲಾಯಿತು. ಎಸ್ ಡಿ ಎಂ ಸಿ ಸದಸ್ಯರಾದ ಬಾಳು ಸಾರವಾಡ, ಕಾಶೀನಾಥ ನಾವಿ, ಜಟ್ಟೆಪ್ಪ ಕಂಬಾರ, ಚಂದ್ರಶೇಖರ ಹಿರೇಮಠ ಹಾಗೂ ಶಿಕ್ಷಕರಾದ ಎ ಎ ರಾಠೋಡ, ಜಿ ಎಸ್ ಮೇತ್ರಿ, ಎನ್ ಜಿ ರೊಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.