 : ನಿರ್ಮಲಾ ಸೀತಾರಾಮನ್‌ ಸೇರಿ ಬಿಜೆಪಿ ನಾಯಕರಿಗೆ ಬಿಗ್‌ ರಿಲೀಫ್‌; ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ
ಬೆಂಗಳೂರು:ಚುನಾವಣಾ ಬಾಂಡ್‌ಗಳ ಮೂಲಕ‌ ಹಣ ಸುಲಿಗೆ ಆರೋಪ ಪ್ರಕರಣದಲ್ಲಿ ( ) ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌( ), ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಬಿಜೆಪಿ ನಾಯಕರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಬಿಜೆಪಿ ನಾಯಕ ನಳಿನ್‌ ಕುಮಾರ್‌ ಕಟೀಲ್‌ ಅವರು ಎಫ್‌ಐಆರ್‌ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠವು, ಬಿಜೆಪಿ ನಾಯಕರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ತಿಲಕ್‌ ನಗರದ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದ್ದು, ಅ.22 ಕ್ಕೆ ಅರ್ಜಿ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದೆ. ದೂರುದಾರ ದರ್ಶನ್‌ ಅಯ್ಯರ್ ಪರವಾಗಿ‌ ವಕೀಲ ಪ್ರಶಾಂತ್‌ ಭೂಷಣ್‌ ವಕಾಲತ್ತು ವಹಿಸಿದ್ದು, ನಳಿನ್‌ ಕುಮಾರ್‌ ಕಟೀಲ್‌ ಪರ ರಾಘವನ್‌ ವಾದ ಮಂಡಿಸಿದ್ದಾರೆ.
ಚುನಾವಣಾ ಬಾಂಡ್‌ಗಳ ಮೂಲಕ‌ ಹಣ ಸುಲಿಗೆ ಆರೋಪದಲ್ಲಿ ನಿರ್ಮಲಾ ಸೀತಾರಾಮನ್ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರ ವಿರುದ್ಧ ತಿಲಕ್‌ ನಗರದ ಪೊಲೀಸ್‌ ಠಾಣೆಯಲ್ಲಿ ಸೆ.28ರಂದು ಎಫ್‌ಐಆರ್‌ ದಾಖಲಾಗಿತ್ತು. ಆದರ್ಶ್ ಅಯ್ಯರ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಐಪಿಸಿ ಸೆಕ್ಷನ್‌ ಐಪಿಸಿ ಸೆಕ್ಷನ್‌ 34 ಅಡಿ ಪ್ರಕರಣ ದಾಖಲಿಸಿದ್ದ ಪೊಲೀಸರು, ಎಫ್‌ಐಆರ್‌ನಲ್ಲಿ ಎ1 ಆಗಿ ನಿರ್ಮಲಾ ಸೀತಾರಾಮನ್‌, ಎ2 ಇಡಿ ಅಧಿಕಾರಿಗಳು, ಎ 3 ಜೆ.ಪಿ. ನಡ್ಡಾ, ಎ4 ನಳಿನ್‌ ಕುಮಾರ್‌ ಕಟೀಲ್‌, ಎ5 ಬಿ.ವೈ. ವಿಜಯೇಂದ್ರ, ಎ6 ಆಗಿ ಬಿಜೆಪಿ ಕಚೇರಿ ಕಾರ್ಯನಿರ್ವಾಹಕರ ಹೆಸರನ್ನು ಉಲ್ಲೇಖಿಸಿದ್ದರು.
ಈ ಸುದ್ದಿಯನ್ನೂ ಓದಿ | : 500 ರೂ. ನೋಟ್‌ ಮೇಲೆ ಗಾಂಧಿ ಬದಲು ಬಾಲಿವುಡ್‌ ನಟನ ಫೊಟೋ ಪ್ರಿಂಟ್‌!
ಚುನಾವಣಾ ಬಾಂಡ್‌ಗಳ ಮೂಲಕ‌ ಹಣ ಸುಲಿಗೆ ಆರೋಪಿಸಿ ಆದರ್ಶ್ ಅಯ್ಯರ್ ಎಂಬವರು ದೂರು ದಾಖಲಿಸಲು ಅನುಮತಿ ಕೋರಿ ಜನಪ್ರತಿನಿಧಿಗಳ ಕೋರ್ಟ್​ನಲ್ಲಿ ಪಿಸಿಆರ್ ದಾಖಲಿಸಿದ್ದರು. ವಾದ ಪ್ರತಿವಾದ ಆಲಿಸಿದ್ದ ಬಳಿಕ ಕೇಸ್ ದಾಖಲಿಸಲು ಕೋರ್ಟ್ ಸೂಚನೆ ನೀಡಿ, ಮುಂದಿನ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್​ 10ಕ್ಕೆ ಮುಂದೂಡಿತ್ತು. ದೂರುದಾರ ಆದರ್ಶ್ ಅಯ್ಯರ್ ಅವರು ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ)ನ ಸಹ ಅಧ್ಯಕ್ಷರಾಗಿದ್ದು, ಎಲೆಕ್ಟೋರಲ್ ಬಾಂಡ್ ಮೂಲಕ ಬೆದರಿಸಿ ಸುಲಿಗೆ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.