ಪಡೆದದ್ದು ಮೊದಲ ರ‍್ಯಾಂಕ್, ಆದರೂ ಸಿಗಲಿಲ್ಲ ಸೀಟು
*ಗದಗಿನ ವೈದ್ಯಕೀಯ ಕಾಲೇಜಿನಲ್ಲಿ ಮೂರು ಸೀಟಿಗೂ ಮೀಸಲಾತಿ
*ಬ್ರಾಹ್ಮಣರಾದವರಿಗೆ ಸರಕಾರಿ ಕಾಲೇಜಿನಲ್ಲಿ ಸೀಟು ಸಿಗಬಾರದೇ?
ಬೆಂಗಳೂರು:ವಿದ್ಯಾರ್ಥಿ ವರ್ಷವಿಡೀ ಕಷ್ಟಪಟ್ಟು ರಾಷ್ಟ್ರ ಮಟ್ಟದ ಪಿಜಿ ನೀಟ್‌ನಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದ. ಗದಗಿನ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಅರೆವಳಿಕೆ (ಅನಸ್ತೇಷಿಯಾ)ಶಾಸ ವಿಭಾಗದಲ್ಲಿ ಎಂ.ಡಿ. ಮಾಡಬೇಕು ಎನ್ನುವ ಹಂಬಲ.
ಪ್ರಥಮ ರ‍್ಯಾಂಕ್ ಪಡೆದಿದ್ದರಿಂದ ಸಹಜವಾಗಿಯೇ ಸೀಟು ಸಿಗಲಿದೆ ಎನ್ನುವ ವಿಶ್ವಾಸ ಆ ವಿದ್ಯಾರ್ಥಿಗಿತ್ತು. ಆದರೆ ಕೌನ್ಸೆಲಿಂಗ್ ಸಮಯದಲ್ಲಿ ನೋಡಿದರೆ ದೊಡ್ಡ ಶಾಕ್ ಕಾದಿತ್ತು. ಅದೇನೆಂದರೆ ಮೊದಲ ರ‍್ಯಾಂಕ್ ಪಡೆದಿದ್ದರೂ ವೈದ್ಯಕೀಯ ಸೀಟು ಸಿಗಲಿಲ್ಲ. ಹೌದು, ಪ್ರಥಮ ರ‍್ಯಾಂಕ್ ಪಡೆದಿದ್ದರೂ ಸೀಟು ಏಕೆ ಸಿಕ್ಕಿಲ್ಲ ಎಂದು ನೋಡಿದಾಗ ಸಿಕ್ಕಿದ ಕಾರಣ, ‘ಮೀಸಲು’ ಎನ್ನುವುದು. ಗಗನ್ ಎನ್ನುವ ವಿದ್ಯಾರ್ಥಿ ಗದಗಿನ ಸರಕಾರಿ ವೈದ್ಯ ಕಾಲೇಜಿನಲ್ಲಿ ಅರೆವಳಿಕೆ (ಅನಸ್ತೇಷಿಯಾ)ಶಾಸದಲ್ಲಿ ಸೀಟು ಪಡೆಯಬೇಕು ಎಂದುಕೊಂಡರೆ, ಇರುವ ಮೂರು ಸೀಟುಗಳಲ್ಲಿ ಮೂರು ಸೀಟು ಮೀಸಲಾತಿಗೆ ಸೀಮಿತವಾಗಿದ್ದವು.
ಆದ್ದರಿಂದ ಆ ವಿದ್ಯಾರ್ಥಿಗೆ ಸೀಟು ಸಿಕ್ಕಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿರುವ ವಿದ್ಯಾರ್ಥಿ, ‘ಎಲ್ಲ ಸೀಟುಗಳನ್ನು ಮೀಸಲಾತಿ ಯಡಿಯಲ್ಲಿ ನೀಡಿದರೆ ನಮ್ಮಂತವರು ಏನು ಮಾಡಬೇಕು? ಸರಕಾರಿ ಕೋಟದಲ್ಲಿ ಬ್ರಾಹ್ಮಣರು ಅಥವಾ ಸಾಮಾನ್ಯ ಕೆಗಟರಿಯಲ್ಲಿ ಇರುವವರು ಎಂ.ಡಿ. ಸ್ನಾತ್ತಕೋತ್ತರ ವನ್ನು ಪಡೆಯಲೇ ಬಾರದೇ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೀಟು ಕೊಡುವುದಿಲ್ಲ ಎಂದು ಹೇಳಿಬಿಡಿ:ಎಲ್ಲ ಸೀಟುಗಳನ್ನು ಮೀಸಲಾತಿಗೆ ನೀಡಿದರೆ ಸಾಮಾನ್ಯ ವಿದ್ಯಾರ್ಥಿಗಳ ಕಥೆಯೇನು? ಕೇವಲ ಮತಬ್ಯಾಂಕ್ಓಲೈಸಲು ಈ ರೀತಿ ಮಾಡುವ ಮೂಲಕ ಬ್ರಾಹ್ಮಣರಿಗೆ ಸೀಟು ನಿರಾಕರಿಸಲಾಗುತ್ತದೆ. ಹೀಗಿದ್ದರೆ ನಮಗೆ ಪರೀಕ್ಷೆಯನ್ನು ಏಕೆ ಬರೆಸಬೇಕು? ಒಂದು ವೇಳೆಸೀಟು ಕೊಡಲು ಆಗುವುದಿಲ್ಲ ಎಂದರೆ ನಮಗೆ ಮೊದಲೇ ಪರೀಕ್ಷಾ ಕೇಂದ್ರದಲ್ಲಿಯೇ ಹೇಳಿಬಿಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ರೀತಿ ಸಮಸ್ಯೆಯಾಗಲು ಪ್ರಮುಖವಾಗಿ ಗದಗಿನ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಇರುವ ಮೂರು ಸೀಟುಗಳಲ್ಲಿ ಎರಡನ್ನು ಮೀಸಲಾತಿಗೆ ಹಾಗೂ ಒಂದನ್ನು ಕಾರ್ಯನಿರತರ ವೈದ್ಯರಿಗೆ ನೀಡಲಾಗುತ್ತದೆ. ಇದರಿಂದ ಸಾಮಾನ್ಯ ವಿದ್ಯಾರ್ಥಿ ಮೀಸಲಾತಿ ಇರುವ ವಿದ್ಯಾರ್ಥಿಗಿಂತ ಉತ್ತಮ ರ‍್ಯಾಂಕ್ ಪಡೆದರೂ, ಸೀಟು ಸಿಗಲು ಆಗುತ್ತಿಲ್ಲ.
ಪ್ರಕರಣವೇನು?ಗಗನ್ ಅವರು ೨೦೨೧ನೇ ಸಾಲಿನ ಆಲ್ ಇಂಡಿಯಾ ನೀಟ್ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದರು. ಗದಗ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮೂರುಸೀಟುಗಳನ್ನು ಅರವಳಿಕೆ ಶಾಸ ಹಾಗೂ ಎರಡನ್ನು ಮಾನಸಿಕ ವಿಭಾಗದ ಸೀಟುಗಳು ನೀಡಲಾಗಿದೆ. ಈ ಎರಡರಲ್ಲಿಯೂ ಎಲ್ಲ ಸೀಟುಗಳನ್ನು ಮೀಸಲಿನಲ್ಲಿ ನೀಡಲಾಗಿದೆ. ಇದು ಕೇವಲ ಅರವಳಿಕೆ ಶಾಸಕ್ಕೆ ಮಾತ್ರವಲ್ಲದೆ, ಎಲ್ಲ ವಿಭಾಗದಲ್ಲಿಯೂ ಈ ಸಮಸ್ಯೆಯಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
***
ನೀಟ್ ಪಿಜಿ ಪರೀಕ್ಷೆ ಬರೆದು ಅದರಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದರೂ ನನಗೆ ಬೇಕಾದ ಕಾಲೇಜಿನಲ್ಲಿ ಅರವಳಿಕೆಶಾಸ್ತ್ರದವಿಭಾಗದಲ್ಲಿ ಸೀಟು ಸಿಕ್ಕಿಲ್ಲ. ಇದಕ್ಕೆ ಕಾರಣ ಮೀಸಲಾತಿ. ಮೀಸಲಿನ ಹೆಸರಲ್ಲಿ ಎಲ್ಲ ಸೀಟುಗಳನ್ನು ಹಂಚಿಕೆ ಮಾಡಿದರೆ, ನಮ್ಮಂತ ಸಾಮಾನ್ಯ ಕೆಗಟರಿಯ ವಿದ್ಯಾರ್ಥಿಗಳು ಏನು ಮಾಡಬೇಕು? ಬ್ರಾಹ್ಮಣರಾಗಿದ್ದ ಮಾತ್ರಕ್ಕೆ ನಮಗೆ ಸರಕಾರಿ ಕಾಲೇಜಿನಲ್ಲಿ ನಮಗೆ ಬೇಕಾದ ವಿಭಾಗದಲ್ಲಿ ಅಭ್ಯಾಸ ಮಾಡಲು ಅವಕಾಶವಿಲ್ಲವೇ?– ಡಾ. ಗಗನ್ ಕುಬೇರ್ ನೊಂದ ವಿದ್ಯಾರ್ಥಿ
