ಯಳಸಂಗಿಯಲ್ಲಿ ಜಾತ್ರಾ ಮಹೋತ್ಸವ
ಆಳಂದ :ತಾಲೂಕಿನ ಯಳಸಂಗಿ ಗ್ರಾಮದಲ್ಲಿ ನಾಳೆ ಶ್ರೀ ಗಂಗಲಿಂಗೇಶ್ವರ ಹಾಗೂ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ 11 ದಿನಗಳ ಮಹಾಪುರಾಣದ ಮಹಾಮಂಗಲ ಜರುಗಲಿದೆ ಎಂದು ದೇವಸ್ಥಾನದ ಟ್ರಸ್ಟ್ ಕಮೀಟಿ ಹಾಗೂ ಸದ್ಭಕ್ತಮಂಡಳಿ ತಿಳಿಸಿದೆ.
ಸತತ ಹನ್ನೊಂದು ದಿನಗಳ ಕಾಲ ಹಾಲುಮತದ ಮಹಾಪುರಾಣ ಜರುಗಿದ್ದು, ನಾಳೆ ಬೆಳಿಗ್ಗೆ 8.30 ಕ್ಕೆ ಪುರಾಣ ಮಹಾ ಮಂಗಲ ಗೊಳ್ಳಲಿದೆ. ನಂತರ ದೇವಸ್ಥಾನದಿಂದ ದೇವಲಗಾಣಗಾಪುರದ ಸಂಗಮನಾಥ ಸನ್ನಿಧಿಗೆ ಪಲ್ಲಕ್ಕಿ ಉತ್ಸವ ತಲುಪಿ ವಾಸ್ತವ್ಯ ಮಾಡಿ, ಶುಕ್ರವಾರ 01 ರಂದು ಬೆಳಿಗ್ಗೆ ಹೊಳೆಯಲ್ಲಿ ಗಂಗಾಸ್ನಾನ ಹಾಗೂ ಪೂಜಾರಿ ಗಳಿಂದ ಹೇಳಿಕೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಶಿವಲಿಂಗಪ್ಪ , ಶರಣಬಸಪ್ಪ ಧಬಾಡೆ ಹಾಗೂ ಬೀರಣ್ಣ ಪಟ್ಟಣ ಅವರು ತಿಳಿಸಿದ್ದಾರೆ.
ಏ. 1 ರಂದು ನಂತರ ಮಹಾಪ್ರಸಾದ ನಂತರ ರಾತ್ರಿ 8.30ಕ್ಕೆ ಯಳಸಂಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಮೆರವಣಿಗೆ ಜರುಗಿ ದೇವಸ್ಥಾನಕ್ಕೆ ತಲುಪುವುದು.
ಶನಿವಾರದಂದು ಪ್ರಸಿದ್ಧ ಗಾಯಕರಿಂದ ಶ್ರೀ ಗಂಗಲಿಂಗೇಶ್ವರ ಹಾಗೂ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಡೊಳ್ಳು ಕುಣಿತ, ಡೊಳ್ಳಿನ ಪದಗಳು ಜರುಗಲಿವೆ. ಅಲ್ಲದೇ, ರವಿವಾರದಂದು ಚಂದಪ್ಪ ಸಿದ್ಧಪ್ಪ ಅರಳಿಕಟ್ಟೆ ಅವರಿಂದ ಕ್ರಾಂತಿವಿರ ಸಂಗೋಳ್ಳಿ ರಾಯಣ್ಣ ಕುರಿತು ಏಕಾಭಿನಯ ಕಾರ್ಯಕ್ರಮ ನಡೆಯಲಿದೆ.
ಅದೇ ದಿನ ರಾತ್ರಿ 10 ಗಂಟೆಗೆ ಇಂಡಿ ತಾಲೂಕಿನ ಝಳಕಿ ಗ್ರಾಮದ ಬೀರಲಿಂಗೇಶ್ವರ ನಾಟ್ಯ ಸಂಘದ ವತಿಯಿಂದ  ಹಠವಾದಿ ಬೀರಪ್ಪ , ಮಹಾಜ್ಞಾನಿ ಮಾಳಪ್ಪ (ಗುರು-ಶಿಷ್ಯರ ಮಹಿಮೆ) ಎಂಬ ಪೌರಾಣಿಕ  ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.