ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ನಿಧನ
ಉಜಿರೆ:ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಉಜಿರೆ ನಿವಾಸಿ ಡಾ.ಬಿ.ಯಶೋ ವರ್ಮ (72) ಸಿಂಗಪುರದಲ್ಲಿ ನಿಧನ ರಾದರು. ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಅನಾರೋಗ್ಯದ ನಿಮಿತ್ತ ಚಿಕಿತ್ಸೆಗಾಗಿ ಅವರು ಸಿಂಗಪುರಕ್ಕೆ ಹೋಗಿದ್ದರು. ಬೆಳ್ತಂಗಡಿ ತಾಲ್ಲೂಕಿನ ಪೆರಾಡಿ ಬೀಡು ನಿವಾಸಿಯಾದ ಅವರು, ಮೂಡುಬಿದಿರೆ ಜೈನ್ ಹೈಸ್ಕೂಲಿನ ‘ಕನ್ನಡ ಪಂಡಿತ’ರೆಂದೇ ಚಿರಪರಿಚಿತರಾಗಿದ್ದ ದಿವಂಗತ ಟಿ. ರಘು ಚಂದ್ರ ಶೆಟ್ಟಿ ಅವರ ಮಗ.
ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾದ ಅವರು ಧಾರವಾಡದಲ್ಲಿ ಜೆಎಸ್‌ಎಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಬಳಿಕ ಉಜಿರೆಯ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ರಾಗಿ ಕರ್ತವ್ಯ ನಿರ್ವಹಿಸಿದ್ದರು. ನಿವೃತ್ತರಾದ ಬಳಿಕ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಯಾಗಿದ್ದರು.
ಉಜಿರೆಯನ್ನು ಜಾಗತಿಕ ನಕಾಶೆಯಲ್ಲಿ ಗುರುತಿಸುವಂತೆ ಭಗೀರಥ ಪ್ರಯತ್ನ ಮಾಡಿರುವ ಅವರು, ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಅವರ ಸಹೋದರ.