ಕೃಷಿ ಸಂಜೀವಿನಿ ಯೋಜನೆಯಿಂದ ರೈತರಿಗೆ ಸಲಹೆ, ಸೂಚನೆ ಲಭ್ಯ: ಕೆ.ಶಿವನಗೌಡ ನಾಯಕ
ದೇವದುರ್ಗ:ಕೃಷಿಯಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳಲು ಮಣ್ಣು ಪರೀಕ್ಷೆ ಅಗತ್ಯವಾಗಿದ್ದು ಕೃಷಿ ಸಂಜೀವಿನಿ ಯೋಜನೆಯಿಂದ ಮಣ್ಣು ಪರೀಕ್ಷೆ ಸೇರಿದಂತೆ ರೈತರಿಗೆ ಅಗತ್ಯ ಸಲಹೆ, ಸೂಚನೆ ಲಭ್ಯವಾಗಲಿದೆ ಎಂದು ಶಾಸಕ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿನಿಗಮದ ಅಧ್ಯಕ್ಷರಾದ ಕೆ.ಶಿವನಗೌಡ ನಾಯಕ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೃಷಿ ಸಂಜೀವಿನಿ ವಾಹನಕ್ಕೆ ಚಾಲನೆ ನೀಡಿ ಮಾತ ನಾಡಿದ ಅವರು, ರೈತರು ಅಗತ್ಯವಾಗಿ ತಮ್ಮ ತಮ್ಮ ಜಮೀನಿ ಮಣ್ಣಿನ ಪರೀಕ್ಷೆ ಮಾಡಿಸ ಬೇಕು. ಅಂದಾಗ ಮಾತ್ರ ಜಮೀನಿಗೆ ನೀಡಬೇಕಾದ ಪೋಷಕಾಂಶಗಳ ಬಗ್ಗೆ ಮಾಹಿತಿ ತಿಳಿಯಲಿದೆ. ಇದೀಗ ಕೃಷಿ ಸಂಜೀವಿನಿ ಯೋಜನೆಯಡಿ ಗ್ರಾಮೀಣ ಭಾಗಕ್ಕೆ ವಾಹನ ತೆರಳಿ ಮಣ್ಣಿನ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡುವುದರಿಂದ ರೈತರಿಗೆ ಅನುಕೂಲವಾಗಲಿದೆ.
ಲ್ಯಾಬ್ ಟು ಲ್ಯಾಂಡ್ ಎಂಬ ಘೋಷ ವಾಕ್ಯದೊಂದಿಗೆ ಕೃಷಿ ಸಂಜೀವಿನಿ ಯೋಜನೆಯಡಿ ಮಣ್ಣಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಯ ಮೂಲಕ ನಿಖರ ಮಾಹಿತಿ ತಿಳಿಯಲಿದೆ. ಇದರಿಂದ ಕೃಷಿ ಚಟುವಟಿಕೆ ಹಾಗೂ ಬೆಳೆಗಳ ನಿರ್ವಹಣೆ ಸುಲಭವಾಗ ಲಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಿದಾಗಿದ್ದು ರೈತರು ಸದು ಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇನ್ನು ಸರ್ಕಾರವೇ ಅಭಿವೃದ್ಧಿಪಡಿಸಿರುವ ಜಿಆರ್’ಜಿ811 ಎಂಬ ನೂತನ ತಳಿಯ ತೊಗರಿ ಬೀಜವನ್ನು ರೈತರಿಗೆ ವಿತರಿಸ ಲಾಯಿತು. ಹೊಸ ತಳಿಯನ್ನು ಪರಿಚಯಿಸಲು ಪ್ರತಿ ಹೋಬಳಿಯ ನೂರು ರೈತರಿಗೆ ಉಚಿತವಾಗಿ ತೊಗರಿ ಬೀಜ ನೀಡಲಾಗುತ್ತಿದೆ. ಅದರ ಜೊತೆಗೆ ಸಮಗ್ರ ಕೃಷಿಗೆ ಉತ್ತೇಜನ ನೀಡಲು ಕೃಷಿ ಇಲಾಖೆಯ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಇದರ ಭಾಗವಾಗಿ ದೇವದುರ್ಗ, ಜಾಲಹಳ್ಳಿ, ಗಬ್ಬೂರು ಹಾಗೂ ಅರಕೇರಾ ಹೋಬಳಿಯ ವ್ಯಾಪ್ತಿಯಲ್ಲಿ ಪ್ರಚಾರಕ್ಕಾಗಿ ನಾಲ್ಕು ಮಾಹಿತಿ ರಥಗಳಿಗೆ ಹಸಿರು ನಿಶಾನೆ ತೋರಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಂಬಣ್ಣ ನೀಲಗಲ್, ಜಿಪಂ ಮಾಜಿ ಸದಸ್ಯ ಲಿಂಗನಗೌಡ ಜೋಳದಹೆಡಗಿ, ಬಿಜೆಪಿ ಮುಖಂಡರಾದ ನಾಗರಾಜ ಪಾಟೀಲ್ ಗೋಪಾಳಪುರ, ಕೆಂಚಣ್ಣ ತಾತ ಕೊತ್ತದೊಡ್ಡಿ, ಜಹೀರ್ ಪಾಷಾ, ದೇವಿಂದ್ರಪ್ಪ ಚಿಕ್ಕ ಬುದೂರು, ಬಸನಗೌಡ ವೆಂಕಟಾಪುರ, ಭೀಮಣ್ಣ ಮೇಟಿ, ಬಸವರಾಜ ಕೊಪ್ಪರ, ಸತೀಶ್ ಬಳೆ, ಬಸವರಾಜ್ ಅಕ್ಕರಕಿ, ಗೋಪಾಲಕೃಷ್ಣ ಮೇಟಿ, ಮಲ್ಲಿಕಾರ್ಜುನ ಹಿರೇಬುದೂರು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಸಿದ್ದರೆಡ್ಡಿ, ಅಧಿಕಾರಿಗಳಾದ ಶ್ರೀನಿವಾಸ್, ರಂಗಪ್ಪ, ಬಂದೇನವಾಜ್, ರೇಖಾ, ಶಿವಲಿಂಗಯ್ಯ, ಕೃಷ್ಣ ಪಾಟೀಲ್ ಸೇರಿದಂತೆ ಸಿಬ್ಬಂದಿ ವರ್ಗದವರಿದ್ದರು.