ಸಣ್ಣಹೊಸೂರು ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಸಿರವಾರ :ತಾಲೂಕಿನ ಸಣ್ಣ ಹೊಸೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸಲಾಯಿತು. ಧ್ವಜಾರೋಹಣವನ್ನು ಎಸ್ಡಿಎಂಸಿ ಅಧ್ಯಕ್ಷ ಲಿಂಗರಾಜ ಗೌಡ ಅತ್ತನೂರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಲೆಯ ಹಳೆಯ ವಿದ್ಯಾರ್ಥಿ ಬಸನಗೌಡ ವೆಂಕಟಪುರ ಮಾತನಾಡಿ, ಸ್ವಾತಂತ್ರ್ಯ ಎಂಬುದು ಸ್ವೇಚ್ಛಾಚಾರವಲ್ಲ. ಪ್ರತಿಯೊಬ್ಬರೂ ಸಚ್ಛಾರಿತ್ರ್ಯರಾಗಿದ್ದರೆ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ. ಲಕ್ಷಾಂತರ ಜನರ ತ್ಯಾಗ ಬಲಿದಾನದಿಂದ ಬಂದಿದೆ. ಪ್ರತಿಯೊಬ್ಬರೂ ಮಹನೀಯರ ತತ್ವಾದರ್ಶಗಳನ್ನು ಪಾಲಿಸಿದಾಗ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ.
ಶಿಕ್ಷಕರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಬಹುದು ಎಂದು ಹೇಳಿದರು. ಇದೇ ವೇಳೆ ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿದರು. ಎಸ್ ಡಿ ಎಂಸಿ ಹಾಗೂ ಗ್ರಾಪಂ ಸದಸ್ಯರಾದ ಅಂಗಡಿ ಲಿಂಗಣ್ಣ ಮಾತನಾಡಿದರು. ವೇದಿಕೆಯಲ್ಲಿ ಗ್ರಾಮದ ಹಿರಿಯ ಮುಖಂಡರಾದ ಶರಣಪ್ಪಗೌಡ, ಮುಖ್ಯೋಪಾಧ್ಯಾಯ ನಾಗಪ್ಪ, ಎಸ್ಡಿಎಂಸಿ ಪದಾಧಿಕಾರಿಗಳು ಇದ್ದರು..ಶಿಕ್ಷಕಿಯರಾದ ಗಂಗಾರಾಣಿ, ಚಂದ್ರಕಲಾ, ಅಂಬಿಕಾ ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಭೂದಾನಿ ಉಚ್ಚಮ್ಮ ಹಾಗೂ ಇತ್ತೀಚಿಗೆ ನಿವೃತ್ತರಾದ ಅಂಗನವಾಡಿ ಶಿಕ್ಷಕಿ ಬಸ್ಸಮ್ಮ ಮತ್ತು ಎಸ್ಡಿಎಂಸಿ ಅಧ್ಯಕ್ಷ ಲಿಂಗರಾಜ ಗೌಡ ಅತ್ತನೂರು ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯ ಕ್ರಮ ಗಮನ ಸೆಳೆಯಿತು.