ನಿಮ್ಮ ಮಗು ಮಲಗಿದ್ದಾಗ ಹಾಸಿಗೆಯಲ್ಲೇ ಮೂತ್ರ ಮಾಡಿಕೊಳ್ಳುತ್ತದೆಯೇ? ಇಲ್ಲಿದೆ ಪರಿಹಾರ
ಸಾಮಾನ್ಯವಾಗಿ ಮಕ್ಕಳು ಹಾಸಿಯಲ್ಲಿ ಮೂತ್ರ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಅದರಲ್ಲೂ ೫ ವರ್ಷ ಮೇಲ್ಪಟ್ಟ ಮಕ್ಕಳು ಸಹ ಈಗಲೂ ರಾತ್ರಿ ಮಲಗಿದ ಸಂದರ್ಭದಲ್ಲಿ ತಮಗೆ ಅರಿವೇ ಇಲ್ಲದಂತೆ ಮೂತ್ರ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಿವೆ. ಇದರಿಂದ ಪೋಷಕರು ಹೆಚ್ಚು ಚಿಂತೆಗೀಡಾಗುತ್ತಾರೆ. ಇದಕ್ಕೆ ಕಾರಣವೇನು ಎಂಬುದರ ಬಗ್ಗೆಯೂ ಆತಂಕ ಹೊಂದಿರುತ್ತಾರೆ. ಫೊರ್ಟಿಸ್‌ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಯೋಗೇಶ್‌ ಗುಪ್ತ ವಿವರಿಸಿದ್ದಾರೆ.
ಮಕ್ಕಳು ಮಲಗಿದ್ದಲ್ಲೇ ಮೂತ್ರ ಮಾಡಲು ಕಾರಣವೇನು?೫ ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ಮಕ್ಕಳು ಮಲಗಿದ್ದಾಗ ಹಾಸಿಗೆಯಲ್ಲೇ ಮೂತ್ರ ಮಾಡಿಕೊಳ್ಳುತ್ತವೆ. ಇದು ಗಂಭೀರವಾದ ವೈದ್ಯಕೀಯ ಅಸ್ವಸ್ಥತೆಯಲ್ಲದಿದ್ದರೂ, ಹಾಸಿಗೆ ಒದ್ದೆ ಮಾಡಿಕೊಳ್ಳುವುದು ಮಗುವಿನ ಮೇಲೆ ಮತ್ತು ಕುಟುಂಬದ ಮೇಲೆ ಬಹುದೊಡ್ಡ ಪರಿಣಾಮಗಳನ್ನು ಬೀರುತ್ತದೆ. ಮಗುವಿನ ಮೂತ್ರಕೋಶ ಚಿಕ್ಕದಿದ್ದರೆ, ಮೂತ್ರ ತುಂಬಿರುವುದನ್ನು ಅರಿಯುವಲ್ಲಿ ಅಸಾಮರ್ಥ್ಯವಿದ್ದರೆ, ಹಾರ್ಮೋನ್‌ ಅಸಮತೋಲನ, ಒತ್ತಡ, ಮೂತ್ರದ ಸೋಂಕು, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಹುಡುಗಿಯರಲ್ಲಿ ಕಂಡು ಬರುವ ಅಪಸ್ಥಾನೀಯ ಮೂತ್ರನಾಳ ಮಲಬದ್ಧತೆ, ಮಧುಮೇಹಇದ್ದಲ್ಲಿ ಅಥವಾ ಕೆಲವು ಸಂದರ್ಭಗಳಲ್ಲಿ ಸ್ಲೀಪ್‌ ಅಪ್ನಿಯಾವನ್ನು ಗುರುತಿಸಲು ಅಸಮರ್ಥತೆಯನ್ನು ಹೊಂದಿದ್ದರೆ ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುವ ಸಾಧ್ಯತೆಯಿರುತ್ತದೆ.
ಇದು ಅಪಾಯದ ಮುನ್ಸೂಚನೆಯೇ?ನಿಮ್ಮ ಮಗುವಿಗೆ ಆಗಾಗ್ಗೆ ಅಥವಾ ತುರ್ತಾಗಿ ಮೂತ್ರ ವಿಸರ್ಜಿಸಲು ಕಷ್ಟವಾಗಿದ್ದರೆ, ಹಗಲಿನಲ್ಲಿ ವಿಪರೀತ ಬಾಯಾರಿಕೆ, ಮೂತ್ರ ವಿಸರ್ಜನೆಯಿಂದ ಉರಿಯುವುದು, ಪಾದಗಳು ಅಥವಾ ಕಣಕಾಲುಗಳಲ್ಲಿ ಊತ, ವಾರಗಳ ನಂತರ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆಯಲ್ಲಿ ಹೊಸ ಸಮಸ್ಯೆ ಇಂತಹ ಸಮಸ್ಯೆ ಕಂಡು ಬಂದಾಗ ಇದು ಆರೋಗ್ಯ ಸಮಸ್ಯೆ ಎಂದು ಪರಿಗಣಿಸಬಹುದು. ಇಂತಹ ಸಂದರ್ಭದಲ್ಲಿ ವೈದ್ಯರನ್ನು ಭೇಟಿ ಮಾಡಿ ವೈದ್ಯಕೀಯ ಸಲಹೆ ಪಡೆದುಕೊಳ್ಳಬಹುದು.
ಪೋಷಕರು ಗಮನವಿಡಬೇಕಾದ ಅಂಶಗಳುಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿರುವ ಬಗ್ಗೆ ಪೋಷಕರು ಆತಂಕಕ್ಕೊಳಗಾಗುವ ಬದಲು ಒಂದಷ್ಟು ಸಲಹೆಯನ್ನು ಪೋಷಕರು ಸಹ ಪಾಲಿಸಬೇಕು.* ೫ ವರ್ಷ ವಯಸ್ಸಿನ ಶೇ.15 ಮಕ್ಕಳು ಇಂತ ಸಮಸ್ಯೆಯನ್ನು ಹೊಂದಿರುವುದು ಸಹಜ. ಹಾಗೆಂದು ಮಕ್ಕಳನ್ನು ಹೊಡೆಯುವುದು, ಬೈಯ್ಯುವುದು ಮಾಡುವುದರಿಂದ ಮಕ್ಕಳಿಗೆ ಭಯದ ಭಾವನೆ ಮೂಡುತ್ತದೆ.* ಮಗು ದಿನದಲ್ಲಿ ನಾಲ್ಕರಿಂದ ಏಳು ಬಾರಿ ಮೂತ್ರ ಮಾಡುತ್ತಿದ್ದರೆ ಅದು ಸಾಮಾನ್ಯ.* ರಾತ್ರಿ ಸಮಯದಲ್ಲಿ ಮಲಗುವ ಮುನ್ನ ಮಗುವಿಗೆ ಮೂತ್ರ ಮಾಡಿಸಿ ಮಲಗಿಸುವ ಅಭ್ಯಾಸ ಬೆಳೆಸಿ.* ಸಕ್ಕರೆ, ಕೆಫೆನ್‌ ಹೊಂದಿರುವ ಪಾನೀಯಗಳ ಸೇವನೆಯನ್ನು ತಪ್ಪಿಸಿ,* ಬೆಳಗ್ಗೆ ಹಾಗೂ ಮಧ್ಯಾಹ್ನ ಹೆಚ್ಚು ನೀರನ್ನು ಕುಡಿಯಲು ಪ್ರೇರೇಪಿಸಿ, ರಾತ್ರಿ ಸಮಯದಲ್ಲಿ ಪಾನೀಯದಂತ ಆಹಾರ ಅಥವಾ ನೀರನ್ನು ನೀಡುವುದು ಕಡಿಮೆ ಮಾಡಿ.* ಮಗು ಮಲಗುವ ಸಮೀಪದಲ್ಲಿಯ ಶೌಚಾಲಯ ಇರುವಂತೆ ನೋಡಿಕೊಳ್ಳೀ.* ರಾತ್ರಿ ಸಮಯದಲ್ಲಿ ಮಗು ಎದ್ದಾಗ ಭಯವಾಗುವ ಸಾಧ್ಯತೆ ಇರುತ್ತದೆ, ಆ ಸಂದರ್ಭದಲ್ಲಿ ಮಗುವಿನೊಂದಿಗೆ ಶೌಚಕ್ಕೆ ನೀವು ಹೋಗುವುದರಿಂದ ಮಗುವಿಗೆ ಧೈರ್ಯ ಬರಲಿದೆ* ಹಾಸಿಗೆಯಲ್ಲಿ ಒದ್ದೆ ಮಾಡಿಕೊಳ್ಳುವ ಮಗುವನ್ನು ಸಾರ್ವಜನಿಕವಾಗಿ ಅವಮಾನ ಮಾಡದಿರಿ, ಇದು ಮಗುವಿನ ಮನಸ್ಸಿಗೆ ಘಾಸಿ ಮೂಡಿಸಬಹುದು* ಮಗು ಹಾಸಿಗೆ ಒದ್ದೆ ಮಾಡುತ್ತದೆಂದು ಡೈಪರ್‌ ಅಭ್ಯಾಸ ಮಾಡಿಸುವುದು ಒಳ್ಳೆಯದಲ್ಲ.* ಇಂತಹ ಮಗುವಿನ ಹಾಸಿಗೆಯನ್ನು ವಾರಕ್ಕೊಮ್ಮೆಯಾದರೂ ಶುಚಿಗೊಳಿಸಿ, ಮಗುವಿಗೆ ಪ್ರತಿ ದಿನ ಸ್ನಾನ ಮಾಡಿಸಿ.