ಗ್ರಾಮ ವಾಸ್ತವ್ಯ: ಹರಿದುಬಂದ ದೂರುಗಳ ಮಹಾಪೂರ
ಕೊಲ್ಹಾರ:ತಾಲ್ಲೂಕಿನ ಹಳ್ಳದಗೆಣ್ಣೂರ ಗ್ರಾಮದಲ್ಲಿ ತಹಶಿಲ್ದಾರ ಪಿ.ಜಿ ಪವಾರ್ ನೇತೃತ್ವ ದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ದೂರು ಗಳ ಮಹಾಪೂರಗಳೇ ಹರಿದುಬಂದವು. ‍
ಗ್ರಾಮದಲ್ಲಿ ಅನೇಕ ಸಮಸ್ಯೆಗಳಿದ್ದು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸಮಸ್ಯೆ, ಸಾರ್ವಜನಿಕ ಶೌಚಾಲಯ ಸಮಸ್ಯೆ, ಹಳ್ಳದ ಸೇತುವೆ ಸಮಸ್ಯೆ, ವೈಯಕ್ತಿಕ ಶೌಚಾಲಯದ ಸಮಸ್ಯೆ, ಸಾರಿಗೆ ಬಸ್ಸುಗಳ, ಕೃಷಿ ಇಲಾಖೆಯ ಅಸಮರ್ಪಕ ಮಾಹಿತಿ ಈ ರೀತಿಯಾಗಿ ಅನೇಕ ಸಮಸ್ಯೆಗಳಿದ್ದು ಅಧಿಕಾರಿಗಳು ಸೂಕ್ತ ಗಮನಹರಿಸಬೇಕು ಎಂದು ಸಭೆ ಪ್ರಾರಂಭವಾಗುತ್ತಿದ್ದಂತೆ ಗ್ರಾಮಸ್ಥರು ಅಧಿಕಾರಿಗಳ ಮೇಲೆ ತಮ್ಮ ಅಸಮಾಧಾನ ಹೊರಹಾಕಿದರು. ತಹಶಿಲ್ದಾರ ಪಿ.ಜಿ ಪವಾರ್ ಸಹಿತ ತಾಲ್ಲೂಕು ವ್ಯಾಪ್ತಿಯ ಅಧಿಕಾರಿಗಳು ಸಮಜಾಯಿಷಿ ನೀಡಲು ಮುಂದಾದರು ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಶೀಘ್ರದಲ್ಲಿಯೇ ಗ್ರಾಮದ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು ಎಂದು ಜನರು ಒತ್ತಾಯಿಸಿ ದರು. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳವ ಭರವಸೆ ನೀಡಿದರು. ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಒಟ್ಟು 58 ಅರ್ಜಿಗಳು ಬಂದಿದ್ದು 20 ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಗಿದೆ 38 ಅರ್ಜಿಗಳನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಶಿಲ್ದಾರ ಪಿ.ಜಿ ಪವಾರ್ ಮಾಹಿತಿ ನೀಡಿದರು.
ತಾಲ್ಲೂಕ ವ್ಯಾಪ್ತಿಯ ವಿವಿಧ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.