ಪ್ರಧಾನಿ ಮೋದಿ ಜನ್ಮದಿನ: ಮಾಧ್ಯಮದವರಿಗೆ ಆರೋಗ್ಯ ತಪಾಸಣೆ
– ಬಿಜೆಪಿ ಮಾಧ್ಯಮ, ವೈದ್ಯಕೀಯ ಪ್ರಕೋಷ್ಠದಿಂದ ಶಿಬಿರ– ಸೇವಾ ಪಾಕ್ಷಿಕದಡಿ ಶಿಬಿರ ಆಯೋಜನೆ
ವಿಜಯನಗರ (ಹೊಸಪೇಟೆ):ಪ್ರಧಾನಮಂತ್ರಿ ನರೇಂದ್ರ‌ ಮೋದಿ ಅವರ ಜನ್ಮದಿನಾಚರಣೆ ನಿಮಿತ್ತ ಸೇವಾ ಪಾಕ್ಷಿಕದಡಿ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಕೋಷ್ಠದಿಂದ ವಿವಿಧ ಮಾಧ್ಯಮ ವರದಿಗಾರರು, ಅವರ ಕುಟುಂಬದವರು ಹಾಗೂ ಪತ್ರಿಕಾ ವಿತರಕರಿಗೆ ವೈದ್ಯಕೀಯ ತಪಾಸಣಾ ಶಿಬಿರ ಏರ್ಪಡಿಸ ಲಾಗಿತ್ತು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವತಿಯಿಂದ ನಡೆದ ಶಿಬಿರಕ್ಕೆ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಸಹಯೋಗ ನೀಡಿತ್ತು. ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ಶಿಬಿರ ನಡೆಯಿತು. ಶಿಬರಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಮೋದಿ ಅವರು ವಿಶ್ವಕಂಡ ಶ್ರೇಷ್ಠ ನಾಯಕ, ಅವರ ಜನ್ಮದಿನಾಚರಣೆ ನಿಮಿತ್ತ ಸೇವಾ ಪಾಕ್ಷಿಕ ಎಂಬ ವಿನೂತನ ಕಾರ್ಯ ಕ್ರಮ ಆಯೋಜಿಸಲಾಗಿದೆ. ಆ ಮೂಲಕ ಮೋದಿ ಅವರ ಆಯುರ್, ಆರೋಗ್ಯ ಹೆಚ್ಚಾಗಲಿ ಎಂದು ಹರಸುತ್ತಿದ್ದೇವೆ. ಅವರ ಸೇವೆ ದೇಶಕ್ಕೆ ಇನ್ನು ಹೆಚ್ಚಾಗಿ ದೊರಕಿ ಭಾರತ ವಿಶ್ವದ ಶ್ರೇಷ್ಠ ದೇಶವಾಗಲಿ ಎಂಬುದು ನಮ್ಮ ಬಯಕೆ ಎಂದು ತಿಳಿಸಿದರು.
ಸಂಸದ ವೈ. ದೇವೇಂದ್ರಪ್ಪ ಮಾತನಾಡಿ, ದಿನದ 18 ಗಂಟೆ ಕೆಲಸ ಮಾಡುವ ಪ್ರಧಾನಿ ಮೋದಿಯವರ ಆರೋಗ್ಯ ಉತ್ತಮ ವಾಗಿರಲಿ. ಮುಂದಿನ ಬಾರಿಯೂ ಅವರೇ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲಿ ಎನ್ನುವ ಆಶಯ ನಮ್ಮದು. ಅವರ ಜನ್ಮದಿನಾಚರಣೆ ನಿಮಿತ್ತ ಆರೋಗ್ಯ ತಪಾಸಣೆ ಏರ್ಪಡಿಸಲಾಗಿದೆ. ಇದರ ಸದುಪಯೋಗಪಡೆದು ಎಲ್ಲರೂ ಆರೋಗ್ಯವಂತರಾಗಿರಿ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ಮೋದಿಯವರ ಜನ್ಮ ದಿನಾಚರಣೆ ನಿಮಿತ್ತ ಪಕ್ಷದಿಂದ ದೇಶಾದ್ಯಂತ ಹದಿನೈದು ವಿವಿಧ ಸೇವಾ ಚಟುವಟಿಕೆ ಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಇಂದು ಮಾಧ್ಯಮ ಪ್ರಕೋಷ್ಠ ಮತ್ತು ವೈದ್ಯಕೀಯ ಪ್ರಕೋಷ್ಠದಿಂದ ಮಾಧ್ಯಮ ಸ್ನೇಹಿತರಿಗೆ ಆರೋಗ್ಯ ತಪಾಸಣೆ ಹಮ್ಮಿಕೊಳ್ಳ ಲಾಗಿದೆ.
ಸದಾ ಒತ್ತಡದ ಜೀವನ ನಡೆಸುವ ಮಾಧ್ಯಮದವರ ಆರೋಗ್ಯ ಉತ್ತಮವಾಗಿರಬೇಕು, ಅವರ ಸೇವೆ ನಾಡಿಗೆ ಸದಾ ಇರಬೇಕು ಎನ್ನುವ ಆಶಯ ನಮ್ಮದು. ಇದೇ ಕಾರಣಕ್ಕೆ ಮಾಧ್ಯಮದವರ ಆರೋಗ್ಯದ ಕಾಳಜಿಗಾಗಿ ವರದಿಗಾರರು, ಅವರ ಕುಟುಂಬದ ಸದಸ್ಯರ ಹಾಗೂ ಪತ್ರಿಕಾ ವಿತರಕರ ಆರೋಗ್ಯ ತಪಾಸಣೆ‌ ನಡೆಸಿ ಅವರ ಉತ್ತಮ ಆರೋಗ್ಯಕ್ಕಾಗಿ ಈ ಪ್ರಯತ್ನ ಮಾಡಲಾಗಿದೆ. ಮಾಧ್ಯಮದವರ ಆರೋಗ್ಯ ಉತ್ತಮವಾಗಿದ್ದರೆ ಸಮಾಜದ ಆರೋಗ್ಯ ಸಹ ಉತ್ತಮವಾಗಿರುತ್ತದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಅಯ್ಯಾಳ್ಳಿ ತಿಮ್ಮಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ಈಶ್ವರ ಸಿಂಗ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಜಿಲ್ಲಾ ಮಾಧ್ಯಮ ಸಂಚಾಲಕ ಸತ್ಯನಾರಾಯಣ, ಸಹ ಸಂಚಾಲಕ ಬಸವರಾಜ ಕರ್ಕಿಹಳ್ಳಿ, ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ ಡಾ. ರಾಘವೇಂದ್ರ ಕಟ್ಟಿ, ಮಂಡಲ ಅಧ್ಯಕ್ಷ ಕಾಸಿಟ್ಟಿ ಉಮಾಪತಿ, ಮಂಡಲ ಮಾಧ್ಯಮ ಸಂಚಾಲಕಿ ಅನುರಾಧಾ, ಪ್ರಧಾನ ಕಾರ್ಯದರ್ಶಿ ಶಂಕರ್ ಮೇಟಿ, ಸಾಲಿ ಸಿದ್ದಯ್ಯಸ್ವಾಮಿ ಹಾಗೂ ಮಾಧ್ಯಮ ವರದಿಗಾರರು ಇದ್ದರು.
110 ಜನರಿಗೆ ತಪಾಸಣೆ:ಮಾಧ್ಯಮ ವರದಿಗಾರರು, ಅವರ ಕುಟುಂಬದವರು ಹಾಗೂ ಪತ್ರಿಕಾ ವಿತರಕರು ಸೇರಿ ಒಟ್ಟು 110 ಜನರಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು. ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ, ದಂತವೈದ್ಯ ಡಾ. ರಾಘವೇಂದ್ರ ಕಟ್ಟಿ ಅವರ ನೇತೃತ್ವದ ತಜ್ಞ ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಿತು.
ಕ್ಯಾನ್ಸರ್ ರೋಗತಜ್ಞ ಡಾ. ಶಂಕರ್, ನೇತ್ರತಜ್ಞ ಡಾ. ಚೇತನ್, ಸ್ತ್ರೀರೋಗ ತಜ್ಞ ಡಾ. ಚಾಮರಾಜ್, ಆಯುರ್ವೇದಿಕ್ ವೈದ್ಯೆ ಡಾ. ಸಲ್ಮಾ, ದಂತ ವೃದ್ಯೆ ಡಾ. ಸ್ಪೂರ್ತಿ ಎಲ್ಲರ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಿದರು.