ಶಾಸಕರಿಂದ ಅಧಿಕಾರ ದುರ್ಬಳಕೆ: ಮಲ್ಲು ಬೆಳ್ಳುಬ್ಬಿ ಆರೋಪ
ಕೊಲ್ಹಾರ :ಬಸವನ ಬಾಗೇವಾಡಿ ಮತಕ್ಷೇತ್ರದ ಯಾವುದೇ ದೊಡ್ಡ ಕಾಮಗಾರಿಗಳಿರಲಿ, ಕಳೆದ ಹತ್ತು ವರ್ಷಗಳಿಂದ ಶಾಸಕ ಶಿವಾನಂದ ಪಾಟೀಲ್ ತಮ್ಮ ಆಪ್ತ ಪ್ರಭಾವಿ ಗುತ್ತಿಗೆದಾರರಾದ ಎಸ್.ಎಸ್.ಆಲೂರು ಅಥವಾ ರಾಮು ಕೌಲಗಿ ಗುತ್ತಿಗೆದಾರರಿಗೆ ಮಾತ್ರ ಸಿಗುವಂತೆ ಪ್ರಭಾವ ಬೀರಿ ಅಧಿಕಾರಿದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಪ್ರಸ್ತುತ ಬಿಜೆಪಿಗೆ 40 % ಸರ್ಕಾರ ಎಂದು ವ್ಯರ್ಥ ಆರೋಪಿಸುತ್ತಿರುವ ಕಾಂಗ್ರೆಸ್ ಪಕ್ಷ ದಲ್ಲಿರುವ ಶಾಸಕ ಶಿವಾನಂದ ಪಾಟೀಲರಿಗೆ ಪರ್ಸೆಂಟೇಜ್ ಸಾಲುವುದಿಲ್ಲ, ಏನಿದ್ದರೂ ಪ್ರತಿ ಕಾಮಗಾರಿಗಳಲ್ಲಿ ಅರ್ಧ ಭಾಗ ಲಾಭಾಂಶ ಸಿಗಬೇಕು ಎಂದು ಮುಖಂಡ ಮಲ್ಲಿ ಕಾರ್ಜುನ ಎಸ್. ಬೆಳ್ಳುಬ್ಬಿ ಗಂಭೀರವಾಗಿ ಆರೋಪಿಸಿದರು.
ಪಟ್ಟಣದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮತಕ್ಷೇತ್ರದಲ್ಲಿ ಶಾಸಕ ಶಿವಾನಂದ ಪಾಟೀಲ್, ಗುತ್ತಿಗೆದಾರರಾದ ಆಲೂರು, ಕೌಲಗಿ ಎಂಬ ಹೆಸರು ಒಂದು ಅಘೋಷಿತ ಕಂಪನಿಯಂತಾಗಿದೆ.
ಕೆಲ ದಿನಗಳ ಹಿಂದೆ ಶಾಸಕರು ಭೂಮಿಪೂಜೆ ನೆರವೇರಿಸಿದ ಬೀಳಗಿ-ಬಾರ್ಕೇಡ್ ಹೆದ್ದಾರಿ, ಬಳೂತಿ ರಸ್ತೆ, ಮಟ್ಯಾಳ-ಮಲಘಾಣ ರಸ್ತೆ, ಇಂಗಳೇಶ್ವರ ರಸ್ತೆ ಹೀಗೆ ಈ ಗುತ್ತಿಗೆದಾರರ ಕಾಮಗಾರಿಗಳ ದೊಡ್ಡ ಪಟ್ಟಿಯೇ ಇದೆ. ಕೊಲ್ಹಾರ ಪಟ್ಟಣ ಅಭಿವೃದ್ಧಿಗಾಗಿ ಈ ಹಿಂದೆ ಕರೆಯಲಾಗಿದ್ದ ಸುಮಾರು 23 ಕೋಟಿ ಮೊತ್ತದ ಟೆಂಡರ್ ಕಾಮಗಾರಿಗಳನ್ನು 2-3 ಕೋಟಿ ಯಂತೆ ಬಿಡಿ ಬಿಡಿಯಾಗಿ ಟೆಂಡರ್ ಕರೆಯಲಾಗಿತ್ತು, ಇದರಿಂದ ಹತ್ತಾರು ಗುತ್ತಿಗೆ ದಾರರಿಗೆ ಕೆಲಸಗಳು ಸಿಕ್ಕು ಸರ್ಕಾರಕ್ಕೂ ಲಾಭವಾಗುತ್ತಿತ್ತು.
ಸದ್ಯ ಅದನ್ನು ಕೈಬಿಟ್ಟು ಶಾಸಕ ಶಿವಾನಂದ ತಮ್ಮ ಲಾಭಕ್ಕಾಗಿ ಎಲ್ಲವನ್ನು ಪ್ಯಾಕೇಜ್ ರೂಪದಲ್ಲಿ ದೊಡ್ಡ ಮೊತ್ತದ ಒಂದೇ ಟೆಂಡರ್ ಕರೆಯುವಂತೆ ಪ್ರಭಾವ ಬೀರಿದ್ದಾರೆ. ಈ ಕಾಮಗಾರಿ ಸಹ ಅವರ ಆಪ್ತ ಗುತ್ತಿಗೆದಾರರಿಗೆ ಸಿಕ್ಕರೂ ಯಾವುದೇ ಆಶ್ಚರ್ಯ ಪಡಬೇಕಿಲ್ಲ ಎಂದರು.
ಶಾಸಕರು ಕೆಬಿಜೆಎನ್ಎಲ್ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಟೆಂಡರ್ ಪ್ರಕ್ರಿಯೆ ಗಳಲ್ಲಿ ತಮಗೆ ಬೇಕಾದಂತೆ ನಿಯಮಗಳ ಬದಲಾವಣೆ ಮಾಡಿಸಿ ಬೇಕಾದವರಿಗೆ ಟೆಂಡರ್ ಮಂಜೂರು ಮಾಡಿಸುವಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನಾನು ಹಾಗೂ ಕೆಬಿಜೆಎನ್ಎಲ್ ಎಇಇ ಎಸ್.ಟಿ.ಬಬಲೇಶ್ವರ ಮಾತನಾಡಿರುವ ಆಡಿಯೋ ಬಿಡುಗಡೆಯಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ತನಿಖೆ ಕೈಗೊಂಡು ಕ್ರಮ ಜರುಗಿಸುವಂತೆ ಹೋರಾಟ ಮಾಡುತ್ತೇನೆ. ಯಾವುದೇ ಇಲಾಖೆಯ ಟೆಂಡರ್ ಗಳಿದ್ದರೂ ಎಲ್ಲ ಅರ್ಹ ಗುತ್ತಿಗೆದಾರರಿಗೆ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟು, ಪಾರದರ್ಶಕವಾಗಿ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.