ಪ್ರಜಾಧ್ವನಿ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷ ಸೇರುವೆ
ಇಂಡಿ: ಕಾಂಗ್ರೆಸ್ ಪಕ್ಷದ ದಕ್ಷತೆ, ಪ್ರಾಮಾಣಿಕತೆ ಮತ್ತು ಕಾರ್ಯಶೀಲತೆಯನ್ನು ಕಂಡು ನಾಳೆ ದಿನಾಂಕ ೧೧ ರಂದು ಇಂಡಿ ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಪ್ರಜಾಧ್ವನಿ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷ ಸೇರುವುದಾಗಿ ಮಾಜಿ ಜಿಲ್ಲಾ ಪಂಚಾ ಯತಿ ಸದಸ್ಯ, ಶ್ರೀ ಭೀಮಾಶಂಕರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಎಂ.ಆರ್. ಪಾಟೀಲ (ಬಳ್ಳೊಳ್ಳಿ) ಹೇಳಿದರು.
ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾನು ಕಳೆದ ೪೦ ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿಯೇ ಕೆಲಸ ಮಾಡಿದ್ದೇನೆ. ಇತ್ತೀಚೆಗೆ ಜೆಡಿಎಸ್ ಘೋಷಿತ ಅಭ್ಯರ್ಥಿ ನನ್ನನ್ನು ಅಪನಂಬಿಕೆಯಿ0ದ ಕಾಣುತ್ತಿದ್ದಾರೆ. ಕಳೆದ ಕೆಲವು ದಿವಸಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿರವರು ಪಂಚರತ್ನ ರಥಯಾತ್ರೆಗೆ ಬಂದಿದ್ದ ಸಂಧರ್ಭದಲ್ಲಿ ಕಾರ್ಯಕ್ರಮಕ್ಕೆ ನನ್ನನ್ನು ಸೌಜ ನ್ಯಕ್ಕೂ ಕೂಡಾ ಆವ್ಹಾನ ನೀಡಿಲ್ಲ.
ಇದೆಲ್ಲದರಿಂದ ನಾನು ಬೇಸತ್ತು ಪಕ್ಷ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಜೊತೆಗೆ ಇಂಡಿ ಮತ್ತು ನಾಗಠಾಣ ಮತಕ್ಷೇತ್ರದ ಸಾವಿರಾರು ಜನ ಮುಖಂಡರು ಮತ್ತು ಆರ್‌ಪಿ ಸಂಘಟನೆಯ ಕೆಲವು ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪೆಯಾಗಲಿದ್ದಾರೆ. ಈ ಸೇರ್ಪಡೆ ಬಗ್ಗೆ ಈಗಾಗಲೇ ನಾನು ಇಂಡಿ ಮತ್ತು ನಾಗಠಾಣ ಎರಡೂ ಮತಕ್ಷೇತ್ರದಲ್ಲಿರುವ ಗ್ರಾಮಗಳಿಗೆ ಭೇಟಿ ನೀಡಿ ನನ್ನ ಜೊತೆಗಿದ್ದ ಎಲ್ಲಾ ಜೆಡಿಎಸ್ ಕರ‍್ಯಕರ್ತರ ಜೊತೆಗೆ ಮಾತನಾಡಿ, ಅವರ ಸಲಹೆ ಪಡೆದುಕೊಂಡು ಈ ನಿರ್ದಾರಕ್ಕೆ ಬಂದಿದ್ದೇನೆ.
ಇ೦ಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲರ ಸ್ವಭಾವ, ಅವರ ಮಾತೃ ಹೃದಯ ಕಂಡಿದ್ದಲ್ಲದೇ ವಿರೋಧ ಪಕ್ಷದಲ್ಲಿದ್ದ ನನ್ನನ್ನು ಕರೆದು ಶ್ರೀ ಭೀಮಾಶಂಕರ ಸಕ್ಕರೆ ಕಾರ್ಖಾನೆಯ ನಿರ್ಧೇಶಕರನ್ನಾಗಿ ಮಾಡಿದ್ದಾರೆ. ಪಕ್ಷಬೇಧ ಮರೆತು ಇಂಡಿ, ಚಡಚಣ ಮತ್ತು ಸಿಂದಗಿ ತಾಲ್ಲೂಕುಗಳ ಎಲ್ಲಾ ಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೈತರ ಹಿತದೃಷ್ಠಿ ಯಿಂದ ೪ ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಶ್ರೀ ಭೀಮಾಶಂಕರ ಸಕ್ಕರೆ ಕಾರ್ಖಾನೆ ನಿರ್ಮಿಸಿದ್ದಾರೆ.
ಇಂಡಿ ಮತಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದಾರೆ. ಇಂಡಿ ಪಟ್ಟಣಕ್ಕೆ ಶಾಶ್ವತ ಮತ್ತು ನಿರಂತರ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಮುಂದಿನ ದಿನಮಾನಗಳಲ್ಲಿ ಮತಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡುವ ಮತ್ತು ಇಂಡಿಯನ್ನು ಜಿಲ್ಲೆಯನ್ನಾಗಿ ಮಾಡುವ ಕನಸು ಹೊತ್ತಿರುವ ಅವರ ಕೈ ಬಲಬಡಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರ ಮಾಡಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಇಂಡಿ ತಾಲ್ಲೂಕು ಗ್ರಾಮ ಪಂಚಾಯತಿಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರಭುಗೌಡ ಬಿರಾದಾರ, ಗಿರೀಶ ಚಾಂದಕವಟೆ, ಸುಭಾಸ ರೂಗಿ, ಚಂದ್ರಶೇಖರ ರೂಗಿ, ರಾವುತಪ್ಪ ಹತ್ತರಕಿ, ಜಾವೀದ ಮೋಮಿನ್, ಪ್ರಶಾಂತ ಕಾಳೆ, ಇಲಿಯಾಸ್ ಬೋರಾಮಣಿ ಇದ್ದರು.