ಅ.26-28 ರವರೆಗೆ ಚೀನಾ ವಿದೇಶಾಂಗ ಸಚಿವ ಅಮೆರಿಕಕ್ಕೆ ಭೇಟಿ
ವಾಷಿಂಗ್ಟನ್:ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಮೂರು ದಿನಗಳ ಭೇಟಿಗಾಗಿ ಗುರುವಾರ ಅಮೆರಿಕಕ್ಕೆ ಮಹತ್ವದ ಭೇಟಿ ನೀಡಲಿದ್ದಾರೆ.
ಬೀಜಿಂಗ್‌ನೊಂದಿಗೆ ಮುಕ್ತ ಸಂವಹನ ನಡೆಸಲು ಹಾಗೂ ಸಂಬಂಧಗನ್ನು ಬಲಗೊಳಿಸಲು ಅಮೆರಿಕ ಅಧ್ಯಕ್ಷ ಬೈಡನ್​ ಬಯಸಿರುವ ಹಿನ್ನೆಲೆಯಲ್ಲಿ ಈ ಭೇಟಿ ನಡೆಯುತ್ತಿದೆ. ಹದಗೆಟ್ಟಿರುವ ಸಂಬಂಧಗಳನ್ನು ಸರಿ ಪಡಿಸುವ ಭಾಗವಾಗಿ ಚೀನಾ ವಿದೇಶಾಂಗ ಸಚಿವರು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಬ್ಲಿಂಕನ್ ಅಕ್ಟೋಬರ್ 26-28 ರವರೆಗೆ ವಾಷಿಂಗ್ಟನ್‌ನಲ್ಲಿ ಚೀನಾದ ತಮ್ಮ ಸಹವರ್ತಿ ವಾಂಗ್​ ಯಿ ಅವರ ಆತಿಥ್ಯ ವಹಿಸಲಿದ್ದಾರೆ.
ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವಿನ ಸಂಬಂಧಗಳು ಇತ್ತೀಚೆಗೆ ತೀವ್ರವಾಗಿ ಬಿಗಾಡಿಸಿವೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅಮೆರಿಕ ಮತ್ತು ಚೀನಾ ಪರಸ್ಪರ ಬಲ ಪ್ರದರ್ಶನಕ್ಕೆ ಮುಂದಾಗುತ್ತಿವೆ. 2018 ರ ಆರಂಭದಿಂದಲೂ ಉಭಯ ರಾಷ್ಟ್ರಗಳ ನಡುವೆ ವ್ಯಾಪಾರ ಯುದ್ಧದಲ್ಲಿ ನಿರತವಾಗಿವೆ, ಎರಡೂ ರಾಷ್ಟ್ರಗಳು ಪರಸ್ಪರರ ಸರಕುಗಳ ಮೇಲೆ ಆಮದು ಸುಂಕಗಳನ್ನು ಹೆಚ್ಚಿಸಿವೆ.
ಅಮೆರಿಕ ಹಿತಾಸಕ್ತಿ ಮತ್ತು ಮೌಲ್ಯಗಳನ್ನು ಮುನ್ನಡೆಸಲು ರಾಜತಾಂತ್ರಿಕತೆ ಮಾರ್ಗಗಳ ಮೂಲಕ ಸಂಧಾನ ಹಾಗೂ ಮಾತುಕತೆಯ ಹಾದಿಯನ್ನು ಬಳಸಿಕೊಳ್ಳಲು ಮುಂದುವರೆಸಿದೆ.
ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸುವಂತೆ ಅಮೆರಿಕದ ಸಂಸದರು ಒತ್ತಾಯಿಸುತ್ತಿರುವ ಈ ಸಮಯದಲ್ಲಿ ಅಮೆರಿಕಕ್ಕೆ ಚೀನಾ ವಿದೇಶಾಂಗ ಸಚಿವರು ಭೇಟಿ ನೀಡುತ್ತಿದ್ದಾರೆ.
ಮುಂದಿನ ತಿಂಗಳು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆಯಲಿರುವ ಪ್ರಾದೇಶಿಕ ಶೃಂಗಸಭೆಯಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್​​​ ನಡುವೆ ಪರಸ್ಪರ ಮಾತುಕತೆ ನಡೆಯುವ ಸಾಧ್ಯತೆ ಇದೆ.