ನ್ಯೂ ಓರ್ಲಿಯನ್ಸ್​: ಸರಣಿ ಅಪಘಾತದಲ್ಲಿ 158 ವಾಹನಗಳ ನಜ್ಜುಗುಜ್ಜು
ನ್ಯೂ ಓರ್ಲಿಯನ್ಸ್:ನ್ಯೂ ಓರ್ಲಿಯನ್ಸ್​ನಲ್ಲಿ ಸೋಮವಾರ ಆವರಿಸಿದ್ದ ಜೌಗು ಪ್ರದೇಶದ ಬೆಂಕಿಯ ಹೊಗೆ ಹಾಗೂ ದಟ್ಟ ಮಂಜಿನಿಂದಾಗಿ ರಸ್ತೆ ಕಾಣದೇ ಬೃಹತ್ ಪ್ರಮಾಣದ​ ಸರಣಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ವಾಹನಗಳಿಗೆ ಹೊತ್ತಿಕೊಂಡ ಬೆಂಕಿ ಹಾಗೂ ಹೊಗೆಯಿಂದಾಗಿ ಕನಿಷ್ಠ ಏಳು ಮಂದಿ ಸಾವನಪ್ಪಿದ್ದಾರೆ. ಸರಣಿ ಅಪಘಾತದಲ್ಲಿ ಸುಮಾರು 158 ವಾಹನಗಳು ನಜ್ಜುಗುಜ್ಜಾಗಿದ್ದು, ಹಲವು ವಾಹನಗಳು ಸುಟ್ಟುಕರಕಲಾಗಿವೆ.
ನ್ಯೂ ಓರ್ಲಿಯನ್ಸ್​ನ ವಾಯವ್ಯ 55 ಇಂಟರ್​ಸ್ಟೇಟ್​ ಹೆದ್ದಾರಿಯಲ್ಲಿ ಬೆಳಗ್ಗೆ ದಟ್ಟ ಮಂಜು ಆವರಿಸಿತ್ತು. ಹೀಗಾಗಿ ವಾಹನ ಚಾಲಕರಿಗೆ ರಸ್ತೆ ಕಾಣದಂತಾಗಿತ್ತು. ಈ ದುರ್ಘಟನೆಯಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಲೂಸಿಯಾನ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.