ಕರಾಚಿಯಲ್ಲಿ ಸ್ಫೋಟ: ಮೂವರ ಸಾವು, 15 ಮಂದಿಗೆ ಗಾಯ
ಕರಾಚಿ:ಗುಲ್ಶಾನ್ ಇ ಇಕ್ಬಾಲ್ ಪ್ರದೇಶದ ಕಟ್ಟಡವೊಂದರಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಮೂವರು ಮೃತ ಪಟ್ಟಿದ್ದಾರೆ. 15 ಮಂದಿ ಗಾಯಗೊಂಡಿದ್ದಾರೆ ಎಂದು ಈಧಿ ಫೌಂಡೇಶನ್ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳನ್ನು ಮತ್ತು ಮೃತದೇಹಗಳನ್ನು ಪಟೇಲ್ ಆಸ್ಪತ್ರೆಗೆ ಒಯ್ಯಲಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಗ್ಯಾಸ್ ಸಿಲಿಂಡರ್ ಸೋರಿಕೆ ಸ್ಫೋಟಕ್ಕೆ ಕಾರಣ ಇರಬಹುದು ಎಂದು ಮುಬಿನಾ ಟೌನ್ ಪೊಲೀಸರು ಶಂಕಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಬಾಂಬ್‌ ನಿಷ್ಕ್ರಿಯ ದಳ ಸ್ಥಳಕ್ಕೆ ಬಂದು ತಪಾಸಣೆ ನಡೆಸಲಿದ್ದು, ಬಳಿಕ ಸ್ಫೋಟಕ್ಕೆ ಕಾರಣ ಏನೆಂಬುದು ಖಚಿತ ವಾಗಲಿದೆ. ಕಟ್ಟಡದ ಎರಡನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಸಮೀಪದ ಕಟ್ಟಡಗಳ ಕಿಟಕಿಗಳು ಹಾಗೂ ವಾಹನಗಳಿಗೆ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಮಂಗಳವಾರ ಕರಾಚಿಯ ಶರೀನ್ ಜಿನ್ನಾ ಕಾಲೊನಿಯ ಬಸ್‌ ಟರ್ಮಿನಲ್‌ ಪ್ರವೇಶ ದ್ವಾರದಲ್ಲಿ ಸಂಭವಿಸಿದ್ದ ಬಾಂಬ್‌ ಸ್ಫೋಟ ದಲ್ಲಿ ಐವರು ಗಾಯಗೊಂಡಿದ್ದರು.