ಚುನಾವಣಾ ಆಯೋಗವನ್ನೇ ವಿಸರ್ಜಿಸಿದ ತಾಲಿಬಾನ್
ಕಾಬೂಲ್:ಆಫ್ಘಾನಿಸ್ತಾನದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ತಾಲಿಬಾನಿಗಳು ಇದೀಗ ದೇಶದ ಚುನಾವಣಾ ಆಯೋಗವನ್ನೇ ವಿಸರ್ಜಿಸಿದೆ.
ಅಫ್ಘಾನಿಸ್ತಾನ ಚುನಾವಣಾ ಆಯೋಗವನ್ನು ತಾಲಿಬಾನ್ ಸರ್ಕಾರ ವಿಸರ್ಜಿಸಿದ್ದು, ಸ್ವತಂತ್ರ ಚುನಾವಣಾ ಆಯೋಗ, ಚುನಾವಣಾ ದೂರು ಆಯೋಗವನ್ನು ವಿಸರ್ಜಿಸಲಾಗಿದೆ ಎಂದು ತಾಲಿ ಬಾನ್ ವಕ್ತಾರ ಬಿಲಾಲ್ ಕರಿಮಿ ಹೇಳಿದ್ದಾರೆ.
ಪ್ರಸಕ್ತ ಸಂದರ್ಭದಲ್ಲಿ ಅಫ್ಘಾನಿಸ್ತಾನದಲ್ಲಿ ಈ ವ್ಯವಸ್ಥೆಗಳು ಅನಗತ್ಯ. ಭವಿಷ್ಯದಲ್ಲಿ ಅಗತ್ಯವಿದ್ದರೆ ನಾವು ಅವುಗಳನ್ನು ಪುನಃ ಸ್ಥಾಪಿಸಲಿದ್ದೇವೆ. ಅದೇ ರೀತಿ ಸಂಸದೀಯ ವ್ಯವಹಾರಗಳಸಚಿವಾಲಯ, ಶಾಂತಿಪಾಲನಾ ಸಚಿವಾಲಯಗಳನ್ನು ಮುಚ್ಚಲಾಗುತ್ತಿದೆ ಎಂದು ಬಿಲಾಲ್ ಹೇಳಿದ್ದಾರೆ.
ತಾಲಿಬಾನ್ ಸರ್ಕಾರ ಈಗಾಗಲೇ ಆಫ್ಘಾನಿಸ್ತಾನದ ಮಹಿಳಾ ವ್ಯವಹಾರಗಳ ಸಚಿವಾಲಯವನ್ನು ಮುಚ್ಚಿದ್ದು, ಇದೀಗ ಚುನಾವಣಾ ಆಯೋಗವನ್ನೂ ಕೂಡ ವಿಸರ್ಜಿಸಿದೆ.
ಇನ್ನು ತಾಲಿಬಾನ್ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಈ ಕುರಿತು ಮಾತನಾಡಿರುವ ಹಿಂದಿನ ಆಡಳಿತದ ಪತನದವರೆಗೂ ಚುನಾವಣಾ ಆಯೋಗದ ಸಮಿತಿಯ ಮುಖ್ಯಸ್ಥರಾಗಿದ್ದ ಔರಂಗಜೇಬ್ ಅವರು, ‘ಈ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಂಡಿದ್ದಾರೆ. ಆಯೋಗವನ್ನು ವಿಸರ್ಜಿಸುವುದು ಭಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಕಿಡಿಕಾರಿದ್ದಾರೆ.
ಹಿರಿಯ ರಾಜಕಾರಣಿ ಹಲೀಮ್ ಫಿದಾಯಿ, ‘ಚುನಾವಣಾ ಆಯೋಗವನ್ನು ವಿಸರ್ಜಿಸುವ ನಿರ್ಧಾರವು ತಾಲಿಬಾನ್ “ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿಲ್ಲ” ಎಂದು ತೋರಿಸುತ್ತದೆ ಫಿದಾಯಿ ಹೇಳಿದ್ದಾರೆ.