ವೈದ್ಯಕೀಯ ಸೇವೆ ಎಲ್ಲರೂ ಗೌರವಿಸಬೇಕು
ದೇಶದಲ್ಲಿ ಇದೀಗ ಜನರನ್ನು ರಕ್ಷಿಸುವಲ್ಲಿ ಆಂತರಿಕವಾಗಿ ಸೈನಿಕರಂತೆ ಪ್ರಮುಖ ಪಾತ್ರ ವಹಿಸಿರುವುದು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ. ಪ್ರಸ್ತುತ ಸಂದರ್ಭದಲ್ಲಿ ಎಷ್ಟೇ ಹಣ, ಬೆಂಬಲ, ಪ್ರಭಾವವಿದ್ದರೂ ವೈದ್ಯಕೀಯ ಸೇವೆ ಹೊರತಾಗಿ ಉಳಿದವೆಲ್ಲವೂ ಗೌಣವಾಗಿವೆ. ವೈದರೂ ನಿಸ್ವಾರ್ಥ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಇಂಥ ವೇಳೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ. ಆದರೆ ಕೆಲವೆಡೆ ಹಲ್ಲೆ ನಡೆಸಿರುವ ಘಟನೆಗಳು ಸಂಭವಿಸಿವೆ. ಈ ಬೆಳವಣಿಗೆ ದುರಂತ ಸಂಗತಿ. ರೋಗಿಗಳ ಸುರಕ್ಷತೆ ಗಾಗಿ ತಮ್ಮ ಜೀವವನ್ನೇ ಪಣವಾಗಿಟ್ಟು ಕಾರ್ಯನಿರ್ವಹಿಸುತ್ತಿರುವ ವೈದ್ಯರ ಪ್ರಯತ್ನಗಳನ್ನು ಸರಿಯಾದ ರೀತಿ ಅರ್ಥೈಸಿಕೊಳ್ಳ ಬೇಕು, ವಾಸ್ತವಾಂಶವನ್ನು ಅವಲೋಕಿಸಬೇಕು.
ಲೋಪಗಳಿದ್ದರೆ ತನಿಖೆಗೆ ಆಗ್ರಹಿಸಬಹುದು. ಆದರೆ ಹಲ್ಲೆಗಳಂಥ ಬೆಳವಣಿಗೆ ಮಾರಕ. ವೈದ್ಯರ ಸೇವೆಯನ್ನು ಗಮನಿಸ ಬಹುದಾದರೆ ಕಳೆದ ಎರಡು ತಿಂಗಳಲ್ಲಿ ದೆಹಲಿಯ ನೂರು ವೈದ್ಯರು ಸೇರಿದಂತೆ ದೇಶದಲ್ಲಿ 420ವೈದ್ಯರು ಮೃತರಾಗಿದ್ದಾರೆ. ಕೋವಿಡ್ ಮೊದಲ ಅಲೆಯಲ್ಲಿ 748 ವೈದ್ಯರು ಸೋಂಕಿಗೆ ತುತ್ತಾಗಿ ಮೃತರಾಗಿದ್ದರು. ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಮಾಹಿತಿ ಪ್ರಕಾರ ಪ್ರಸ್ತುತ ಪರಿಸ್ಥಿತಿಯಲ್ಲಿ12ಲಕ್ಷಕ್ಕೂ ಅಧಿಕ ವೈದ್ಯರು ದೇಶದಲ್ಲಿ ಈ ವೇಳೆ ಕಾರ್ಯನಿರ್ವಹಿಸುತ್ತಿದ್ದಾರೆ. ಹಲ್ಲೆ, ಪ್ರಕರಣ ದಾಖಲು, ಕಾನೂನು, ಶಿಕ್ಷೆಗಳೆಲ್ಲ ನಂತರದ ಬೆಳವಣಿಗೆ.
ಆದರೆ ಪ್ರತಿಯೊಬ್ಬ ನಾಗರಿಕರು ವೈದ್ಯಕೀಯ ಸೇವೆಯನ್ನು ಗೌರವಿಸಬೇಕಿರುವುದು ಹಾಗೂ ನಿಧನರಾಗಿರುವ ವೈದ್ಯರ ಸೇವೆಯನ್ನು ಸ್ಮರಿಸಬೇಕಿರುವುದು ಮುಖ್ಯ. ಇಂದಿನ ಕಠಿಣ ಪರಿಸ್ಥಿತಿಯಲ್ಲಿ ವೈದ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸುವ ಮೊದಲು ವೈದ್ಯಕೀಯ ಕ್ಷೇತ್ರ ಸಲ್ಲಿಸುತ್ತಿರುವ ಸೇವೆಯನ್ನು ಪ್ರತಿಯೊಬ್ಬರೂ ಮನಗಾಣಬೇಕು.