ಜನರಲ್ಲಿ ಗೊಂದಲ ಮೂಡಿಸದಿರಲಿ ಜನಪ್ರತಿನಿಧಿಗಳ ನಡೆ
ದೇಶ ಇಂದು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ನಮ್ಮ ದೇಶದ ಮೂರು ಲಕ್ಷಕ್ಕೂ ಅಧಿಕ ಜನರು ಕರೋನಾಕ್ಕೆ ಬಲಿಯಾದ ಅಂಕಿ ಅಂಶವುನಮ್ಮೆದುರು ಇದೆ.
ಆ ಮೂಲಕ, ಅಮೆರಿಕ, ಬ್ರೆಜಿಲ್ ದೇಶಗಳ ನಂತರದ ಸ್ಥಾನ ನಮ್ಮ ದೇಶಕ್ಕೆ ದೊರೆತಿದೆ. ಹಳ್ಳಿಗಳನ್ನೂ ಬಿಡದೆ ಕಾಡುತ್ತಿರುವ ಈಸೋಂಕನ್ನು ತಡೆಗಟ್ಟಲು ಲಸಿಕೆಯೊಂದೇ ಪರಿಣಾಮಕಾರಿ ಅಸ್ತ್ರ ಎಂಬ ಅರಿವಿದ್ದರೂ, ಲಸಿಕೆ ನೀಡಿಕೆಯ ಕಾರ್ಯ ನಿಧಾನವಾಗಿ ಸಾಗಿದೆ. ನಾನಾ ಸಂಕೀರ್ಣ ಕಾರಣಗಳಿಂದಾಗಿ, ಇದುವರೆಗೂ ನಮ್ಮ ದೇಶದ ಶೇ.10ರಷ್ಟು ಜನಕ್ಕೂ ಎರಡು ಡೋಸ್ ಲಸಿಕೆ ನೀಡಲು ಸಾಧ್ಯವಾಗಿಲ್ಲ ಎಂಬುದು ಕಟು ಸತ್ಯ.
ಲಸಿಕೆ ನೀಡುವ ಕಾರ್ಯಕ್ರಮವು ನಿಧಾನಗೊಳ್ಳಲು ಸರಕಾರದ ತಪ್ಪು ನಿರ್ಣಯಗಳೇ ಕಾರಣ ಎಂದು ವಿರೋಧ ಪಕ್ಷಗಳುಸಮರೋಪಾದಿಯಲ್ಲಿ ಪ್ರಚಾರ ಮಾಡುತ್ತಿರುವುದು ಒಂದೆಡೆಯಾದರೆ, ಇದನ್ನು ಬೆಂಬಲಿಸುವ ಚಿಂತಕರ ಪಡೆಯೇ ನಮ್ಮ ದೇಶ ದಲ್ಲಿದೆ. ಇದಕ್ಕೆ ಪ್ರತಿಯಾಗಿ, ವಿರೋಧ ಪಕ್ಷಗಳ ಅಪಪ್ರಚಾರದಿಂದಾಗಿ ಲಸಿಕೆ ನೀಡುವ ಪ್ರಕ್ರಿಯೆ ನಿಧಾನಗೊಂಡಿತು ಎಂದು ಆಡಳಿತ ಪಕ್ಷ ಹೇಳುತ್ತಿದೆ. ಈ ರೀತಿಯ ಹಲವು ಸ್ತರಗಳ ವಾದ ಪ್ರತಿವಾದಗಳ ನಡುವೆ ಸಿಕ್ಕಿಕೊಂಡಿರುವ ಅಮಾಯಕ ಜನಸಾ ಮಾನ್ಯರು ಲಸಿಕೆಗಾಗಿ ಹಾಹಾಕಾರ ನಡೆಸುತ್ತಿರುವುದಂತೂ ನಿಜ.
ಒಂದನೆಯ ಡೋಸ್ ಲಸಿಕೆ ಪಡೆದು ಎರಡನೆಯ ಡೋಸ್ ನ್ನು ಸಕಾಲದಲ್ಲಿ ಪಡೆಯಲು ಸಾಧ್ಯವಾಗದೇ ಇರುವವರ ಸಂಖ್ಯೆಹೆಚ್ಚಳಗೊಳ್ಳುತ್ತಿದೆ. ಇನ್ನೊಂದೆಡೆ ಹದಿನೆಂಟು ವರ್ಷ ಮೀರಿದ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಹುಸಿ ಅಭಿಯಾನ ವನ್ನು ಆರಂಭಿಸಿದ  ಸರಕಾರಗಳು, ಅಗತ್ಯ ಇದ್ದಷ್ಟು ಲಸಿಕೆಯನ್ನು ಪೂರೈಸಲಾಗದೇ ಅಪಹಾಸ್ಯಕ್ಕೀಡಾದ ಘಟನೆಯೂ ನಡೆಯಿತು. ಈ ಗೊಂದಲಗಳನ್ನು, ಸಂಭಾವ್ಯ ಆಪತ್ತನ್ನು ನಿವಾರಿಸಲು, ಲಸಿಕೆ ನೀಡುವ ಮಹತ್ ಕಾರ್ಯವನ್ನು ಸರಕಾರವು ಸಮರೋಪಾದಿಯಲ್ಲಿ ಕೈಗೊಂಡು, ಜನರಲ್ಲಿ ಧೈರ್ಯ ತುಂಬಬೇಕಾದದ್ದು ಇಂದಿನ ತುರ್ತು ಅಗತ್ಯ ಎನಿಸಿದೆ.