ಸಾಂಕ್ರಾಮಿಕ ದಾಳಿಗಳ ತಡೆಗೆ ಮತ್ತಷ್ಟು ಎಚ್ಚರ ಮುಖ್ಯ
ಕರೋನಾದಿಂದಾಗಿ ಸಾವುಗಳ ಜತೆಗೆ ಜನಜೀವನದ ಮಾನಸಿಕ ಸ್ಥಿತಿಯೂ ಬದಲಾಗುತ್ತಿದೆ. ಈ ಕಾರಣದಿಂದಾಗಿ ಪ್ರಧಾನಿ ಮೋದಿ ಯವರು ಹೀಗೆ ನುಡಿಯುತ್ತಾರೆ. ಕಳೆದ ಒಂದು ವರ್ಷದ ಕರೋನಾ ಸ್ಥಿತಿಯ ಬೆಳವಣಿಗೆಯಿಂದ ಸಂಕಷ್ಟದ ಸ್ಥಿತಿ ನಿರ್ಮಾಣ ಗೊಂಡಿದೆ. ಆದರೆ ಪರಿಸ್ಥಿತಿ ಹೀಗೆಯೇ ಇರುವುದಿಲ್ಲ.
ಉಂಟಾಗಿರುವ ದುಷ್ಪರಿಣಾಮಗಳಂತೆಯೇ ಸಾಂಕ್ರಾಮಿಕಗಳ ಕುರಿತು ತಿಳಿವಳಿಕೆಯೂ ಹೆಚ್ಚಾಗಿದೆ. ಲಸಿಕೆಗಳಿಂದ ಆಗುವ ಪ್ರಯೋಜನಗಳು, ಲಸಿಕೆಗಳ ಬಗ್ಗೆ ಜಾಗೃತಿಯೂ ಹೆಚ್ಚುತ್ತಿದೆ ಎಂದು ತಿಳಿಸುತ್ತಾರೆ. ಖಂಡಿತವಾಗಿಯೂ ಈ ಮಾತು ನಿಜ. ಕರೋನಾ ನಂತರದ ಪರಿಸ್ಥಿತಿಯಲ್ಲಿ ಜನರ ಜೀವನ ವಿಧಾನವೂ ಬದಲಾಗಿದೆ. ಸಾವು-ನೋವುಗಳ ಜತೆಗೆ ಪ್ರತಿಯೊಬ್ಬರಲ್ಲಿ ಸುರಕ್ಷತೆಯ ಹೊಣೆಗಾರಿಕೆಯೂ ಜಾಗೃತವಾಗುತ್ತಿದೆ. ಇಂಥ ಸಂದರ್ಭದಲ್ಲಿ ನಾವು ಯೋಚಿಸಬೇಕಿರುವುದು ನಮ್ಮನ್ನುಪಾರು ಮಾಡಲು ಶ್ರಮಿಸುತ್ತಿರುವ ವೈದ್ಯ ವಿಜ್ಞಾನಿಗಳ ಬಗ್ಗೆ. ಇವರ ಸೇವೆಯನ್ನು ಇಡೀ ದೇಶವೇ ಗೌರವಿಸಬೇಕು.
ಲಸಿಕೆ ಅಭಿವೃದ್ಧಿಪಡಿಸಿದ ಕಾರ್ಯದಿಂದ ಹಿಡಿದು ಇವರ ಕಾರ್ಯವೈಖರಿ, ಬದ್ಧತೆ, ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿರುವ ಪರಿ ಎಲ್ಲವೂ ಶ್ಲಾಘನೀಯ. ಇದೀಗ ಕೋವಿಡ್ ವಿರುದ್ಧ ಸೆಣಸುತ್ತಿರುವಂತೆಯೇ ಮುಂದಿನ ದಿನಗಳಲ್ಲಿಯೂ ಸಂಭವಿಸಬಹುದಾದ ಸಾಂಕ್ರಾಮಿಕ ದಾಳಿಗಳ ಕುರಿತಾಗಿಯೂ ಮುನ್ನೆಚ್ಚರಿಕೆವಹಿಸಬೇಕಿರುವುದು ಇಂದಿನ ಅಗತ್ಯ. ಶತ್ರುದೇಶ ಗಳಿಂದ ರಕ್ಷಣೆಗಾಗಿ ಗಡಿಯಲ್ಲಿ ಯೋಧರನ್ನು ನೇಮಿಸಿರುವಂತೆಯೇ, ಸಾಂಕ್ರಾಮಿಕ ದಾಳಿಗಳ ತಡೆಗಾಗಿಯೂ ಮತ್ತಷ್ಟು ಸಜ್ಜುಗೊಳ್ಳಬೇಕಿದೆ.
ಇದಕ್ಕಾಗಿ ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆಗಳು, ವೈದ್ಯಕೀಯ ಸಲಕರಣೆಗಳು, ಪ್ರಯೋಗಶಾಲೆ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ವೈದ್ಯಕೀಯ ವಿಜ್ಞಾನಿಗಳ ಸಂಖ್ಯೆಯನ್ನು ಹೆಚ್ಚಿಸಬೇಕಾದ ಸ್ಥಿತಿ ಕಂಡುಬರುತ್ತಿದೆ. ಪ್ರಕೃತಿ ವಿಕೋಪನಿಽಯಂತೆಯೇ ಸಾಂಕ್ರಾಮಿಕ ಸುರಕ್ಷತೆಗಾಗಿ ಅನುದಾನ ಮೀಸಲಿಡಬೇಕಾದ ಅನಿವಾರ್ಯತೆಯೂ ಎದುರಾಗಿದೆ. ಮುಂದಿನ ದಿನಗಳಲ್ಲಿ ಈ ಎಲ್ಲ ಸುರಕ್ಷತಾ ಕ್ರಮಗಳಿಗಾಗಿ ದೇಶ ಮತ್ತಷ್ಟು ಸಜ್ಜುಗೊಳ್ಳಬೇಕಿದೆ.