ಭಾರತದ ವಿರೋಧಿ ನಿಲುವು ನೇಪಾಳಕ್ಕೆ ಕಲಿಸಬೇಕಿದೆ ಪಾಠ
ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಜನಸಂಖ್ಯೆ ದೃಷ್ಟಿಯಿಂದಲೂ ಬೃಹತ್ತಾದ ದೇಶ. ಸದಾ ಶಾಂತಿಯನ್ನು ಬಯಸುವ ಈ ರಾಷ್ಟ್ರ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಒಳಗೊಂಡಿರುವ ರಾಷ್ಟ್ರವೂ ಹೌದು.
ಸಂವಿಧಾನದ ಆಶಯಗಳ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ದೇಶವು ಸಕಲರ ಹಿತವನ್ನು ಬಯಸುವ ರಾಷ್ಟ್ರ. ಇಂಥದೊಂದು ರಾಷ್ಟ್ರದ ಮೇಲೆ ಅಗಾಗ್ಗೆ ಕೆಲವು ದೇಶಗಳು ವಿವಾದಗಳು ಸೃಷ್ಟಿಸುತ್ತಲೇ ಬಂದಿವೆಯಾದರೂ, ಭಾರತವು ವಿವಾದಗಳನ್ನು ಬಗೆಹರಿಸಿಕೊಳ್ಳುವಲ್ಲಿ ತನ್ನ ಸಾಮರ್ಥ್ಯದ ಮೂಲಕ ಸಶಕ್ತ ರಾಷ್ಟ್ರ ವಾಗಿರುವುದನ್ನು ಸಾಬೀತುಪಡಿಸಿದೆ.ಅನೇಕ ರಾಷ್ಟ್ರಗಳೊಂದಿಗೆ ಸೌಹರ್ದ ಕಾಪಾಡಿಕೊಂಡು ಸಾಗುತ್ತಿದೆ. ಆದರೆ ವಿಭಜನೆ ಕಾರಣದಿಂದಾಗಿ ಹಾಗೂ ಧಾರ್ಮಿಕ ಸಂಘರ್ಷಗಳ ಕಾರಣಗಳಿಗಾಗಿ ಪಾಕಿಸ್ತಾನದೊಂದಿಗಿನ ಸ್ನೇಹದಲ್ಲಿ ಮಾತ್ರ ಮುಸುಕಿನ ಸಂಘರ್ಷ ಸಾಗುತ್ತಾ ಬಂದಿದೆ.
ಈ ಕಾರಣ ಗಳಿಂದಾಗಿ ಪಾಕಿಸ್ತಾನವನ್ನು ವಿರೋಧ ರಾಷ್ಟ್ರ ಎಂಬುದಾಗಿ ಬಿಂಬಸಲಾಗಿದ್ದರೂ, ಆಡಳಿತಾತ್ಮಕ ವಿಚಾರಗಳಲ್ಲಿ ಭಾರತವು ಪಾಕಿಸ್ಥಾನ ದೊಂದಿಗೂ ಸಹನೆಯಿಂದಲೇ ಸೌಹರ್ದ ಸಾಧಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ಚೀನಾ ಮತ್ತು ನೇಪಾಳ ಹೊಸ ಹೊಸ ರೀತಿಯ ಕ್ಯಾತೆಗಳನ್ನು ಆರಂಭಿಸಿವೆ. ಲಡಾಖ್‌ನಲ್ಲಿ ಗಡಿ ಸಂಘರ್ಷ ಸ್ಥಾಪಿಸುವ ಮೂಲಕ ಚೀನಾ, ಭಾರತದ ವಿರುದ್ಧ ವಿರೋಧಿ ನಿಲುವು ಪ್ರಕಟಿಸಿತ್ತು.
ಇದರಿಂದ ಪಾಕಿಸ್ತಾನ ದಂತೆಯೇ ಚೀನಾವೂ ಭಾರತದ ವಿರೋಧಿ ನಡೆಯ ದೇಶವಾಗಿ ಕಾಣಲಾರಂಭಿಸಿತು. ಇದೀಗ ಈ ಸಾಲಿಗೆ ಸೇರಿರುವ ಮತ್ತೊಂದು ದೇಶ ನೇಪಾಳ. ಭಾರತೀಯರ ಆರಾಧ್ಯ ದೈವ ಶ್ರೀರಾಮ ನೇಪಾಲದ ಚಿತ್ವಾನ್ ಜಿಲ್ಲೆಯ ಮಾದಿ ಅಥವಾ ಅಯೋಧ್ಯಾಪುರಿಯಲ್ಲಿ ಜನಿಸಿದ್ದು, ಭಾರತದ ಅಯೋಧ್ಯೆಯಲ್ಲಲ್ಲ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿದಿದ್ದರು. ಇದೀಗ ಯೋಗವು ಭಾರತದ್ದಲ್ಲ, ನೇಪಾಳದ್ದು ಎಂಬ ಹೇಳಿಕೆ ಮುಖಂತರ ಮತ್ತೊಮ್ಮೆ ಭಾರತೀಯರ ಮನಸ್ಸುಗಳ ಘಾಸಿಗೊಳಿಸುವ ಮೂಲಕ ಭಾರತದ ವಿರೋಧಿ ನಡೆ ಪ್ರದರ್ಶಿಸಿದ್ದಾರೆ. ಭಾರತದ ವಿರುದ್ಧ ಪದೇ ಪದೆ ವಿವಾದಿತ ಹೇಳಿಕೆಗಳನ್ನು ನೀಡುತ್ತಿರುವ ನೇಪಾಳಕ್ಕೆ ತಕ್ಕ ಉತ್ತರ ನೀಡಬೇಕಿರುವುದು ಇಂದಿನ ಅನಿವಾರ್ಯ.