ತೀರ್ಮಾನಕ್ಕೂ ಮೊದಲು ಎಚ್ಚರಿಕೆ ಅಗತ್ಯ
ರಾಜ್ಯದಲ್ಲಿ ಗಣೇಶೋತ್ಸವದ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಸರಕಾರ ಅನುಮತಿ ಕೊಡಲಿ, ಬಿಡಲಿ ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೊಂದು ಬಹುಸಂಖ್ಯಾತರ ಭಾವನಾತ್ಮಕ ವಿಚಾರವಾಗಿರುವುದರಿಂದ ಸರಕಾರ ಕೂಡ ಆತುರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳುವಂತಿಲ್ಲ.
ಹಿಂದೂಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರಕ್ಕೆ ಹಿಂದೂಗಳ ಆಚರಣೆಗೆ ಅನುಮತಿ ಕೊಡ ದಿದ್ದರೆ ಇಡೀ ಹಿಂದೂ ಸಮಾಜವೇ ತಿರುಗಿ ಬೀಳಬಹುದು ಎಂಬ ಆತಂಕ ಎದುರಾಗಿದೆ. ಆದರೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಯಾವುದೇ ಹಬ್ಬಗಳ ಆಚರಣೆಗೆ ಅನುಮತಿ ನಿರಾಕರಿಸುವ ಸಾಧ್ಯತೆ ಇದೆ. ಆ ಕುರಿತು ಸಿಎಂ ನೇತೃತ್ವದ ಸಭೆ ಇದೇ೫ರಂದು ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದೆ. ಇಲ್ಲಿ ಗಮನಿಸ ಬೇಕಾದ ಸಂಗತಿಯೆಂದರೆ, ಸರಕಾರದ ಮೇಲೆ ಇಷ್ಟೊಂದು ಭಾವನಾತ್ಮಕ ಒತ್ತಡ ತರುತ್ತಿರುವುದಾದರೂ ಯಾಕೆ? ಮತ್ತು ಯಾರು? ಆ ರೀತಿ ಒತ್ತಡ ತಂದು ಅದ್ಧೂರಿ ಹಬ್ಬ ಆಚರಿಸಿದರೆ ಆಗುವ ಹಾನಿ ಯಾರಿಗೆ ಎಂಬು ದನ್ನೂ ಯೋಚಿಸಬೇಕಲ್ಲವೇ? ಅಷ್ಟಕ್ಕೂ ಕೋವಿಡ್ ಆತಂಕ ಪೂರ್ಣ ಮರೆಯಾಗಿದೆಯೇ? ಎರಡನೇ ಅಲೆಯಲ್ಲಿ ಆಗಿರುವ ಗಾಯ ಇನ್ನೂ ವಾಸಿಯಾಗಿಲ್ಲ.
ಆಗ ಚುನಾವಣೆಗಳಿಂದಲೇ ಎರಡನೇ ಅಲೆ ಬಂತು ಎಂದು ಅಬ್ಬರಿಸಿದವರೇ ಇಂದು ಗಣೇಶೋತ್ಸವಕ್ಕೆ ಒತ್ತಡ ತರುತ್ತಿದ್ದಾರೆ. ಇದರ ಹಿಂದಿರುವ ಉದ್ದೇಶ ವಾದರೂ ಏನು ಎಂಬುದು ಯೋಚಿಸಬೇಕಿದೆ. ಅಷ್ಟಕ್ಕೂ ಗಣೇಶೋತ್ಸವ ಆಚರಣೆ ಎಲ್ಲ ಹಬ್ಬಗಳಂತೆ ಪೂಜೆ, ಪುನಸ್ಕಾರಗಳಿಗೆ ಮುಗಿಯುವುದಿಲ್ಲ. ಭಕ್ತಿಗಿಂತ ಆಡಂಬರಕ್ಕೇ ಹೆಚ್ಚು ಒತ್ತು ಇರುವುದನ್ನು ಬಹುಶಃ ಎಲ್ಲರಿಗೂ ಗೊತ್ತಿರುವ ವಿಚಾರವೇ. ಗಣೇಶೋತ್ಸವದ ನೆಪದಲ್ಲಿ ಕೆಲವರು ಬಲವಂತವಾಗಿ, ಬೆದರಿಸಿ ಚಂದಾ ಎತ್ತುವುದಂಟು. ಶಬ್ದ ಮಾಲಿನ್ಯದಿಂದ ಜನರ ನೆಮ್ಮದಿ ಹಾಳು ಮಾಡುವ ಪ್ರವೃತ್ತಿಯೂ ಹೆಚ್ಚುತ್ತಿದೆ.
ಇಂಥ ಭಕ್ತಿಯನ್ನು ವಿನಾಯಕ ಬಯಸುತ್ತಾನೆಯೇ? ಅಷ್ಟಕ್ಕೂ ಕೋವಿಡ್ ಕರಿನೆರಳಿನಲ್ಲಿ ಈ ಬಗೆಯ ಆಚರಣೆ ತೀರಾ ಅಗತ್ಯವೇ? ಕೋವಿಡ್ ಆತಂಕದಈ ಸಮಯದಲ್ಲಿ, ಮನೆಯಲ್ಲಿಯೇ ಚಿಕ್ಕ ಮೂರ್ತಿ ಪ್ರತಿಷ್ಠಾಪಿಸಿ ನಿಜವಾದ ಭಕ್ತಿಯೊಂದಿಗೆ ವಿಘ್ನ ನಿವಾರಕನನ್ನು ನೆನೆದರೆ ಸಾಕಲ್ಲವೇ?