ಕನ್ನಡ ಅಸ್ಮಿತೆಗೆ ಸಂದ ಜಯ
ಬೆಳಗಾವಿ ಭಾಗದಲ್ಲಿ ಯಾವುದೇ ಚುನಾವಣೆ ನಡೆಯಲಿ ಅಲ್ಲಿ, ಪಕ್ಷಕ್ಕಿಂತ ಹೆಚ್ಚಾಗಿ ಭಾಷೆಯ ಮೇಲೆ ಚುನಾವಣೆ ನಡೆಯುವುದು ನೋಡಿದ್ದೇವೆ. ಕೆಲ ವರ್ಷಗಳಹಿಂದೆ ಎಂಇಎಸ್ ಶಾಸಕರು, ಕಾರ್ಪೋರೇಟರ್‌ಗಳು ಗೆಲ್ಲುವ ಮೂಲಕ, ಕನ್ನಡದ ಅಸ್ಮಿತೆಯನ್ನೇ ಪ್ರಶ್ನಿಸುವ, ಕಲಾಪಗಳಲ್ಲಿ ಮರಾಠಿತನವನ್ನು ಪ್ರದರ್ಶನ ಮಾಡುವ ಕೆಲಸವನ್ನು ಮಾಡಿದ್ದರು.
ಆದರೆ ಕಳೆದ ಬಾರಿ ಎಂಇಎಸ್ ಅಭ್ಯರ್ಥಿಗಳು ವಿಧಾನಸಭೆಗೆ ಆಯ್ಕೆಯಾಗದೇ ಈ ರೀತಿಯ ಪುಂಡಾಟಕ್ಕೆ ಕೊನೆಯಾಡಿತ್ತು. ಇದೀಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ಕಡಿಮೆ ಸೀಟುಗಳನ್ನು ಪಡೆಯುವ ಮೂಲಕ, ಬೆಳಗಾವಿಯಲ್ಲಿ ಕನ್ನಡಕ್ಕೆ ಮಾನ್ಯತೆ ಎನ್ನುವ ಸಂದೇಶ ರವಾನೆಯಾಗಿದೆ. ಆರಂಭದಲ್ಲಿ ಭಾಷೆಯ ವಿಷಯದಲ್ಲಿ ಗೊಂದಲ ಸೃಷ್ಟಿಸುತ್ತಿದ್ದ ಎಂಇಎಸ್ ಬಳಿಕ, ಕರ್ನಾಟಕದಲ್ಲಿ ಕನ್ನಡಕ್ಕೆ ಸ್ಥಾನವಿಲ್ಲ.
ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎನ್ನುವ ವಾದದೊಂದಿಗೆ ರಾಜಕೀಯ ಮಾಡಲು ಶುರು ಮಾಡಿತ್ತು. ಇದಾದ ಬಳಿಕ ಗಡಿಯಲ್ಲಿ ಒಂದಿಲ್ಲೊಂದು ತಂಟೆಯ ಮೂಲಕ, ಕನ್ನಡಿಗರನ್ನು ಕೆಣಕಿದರು. ಇದೇ ವಿಷಯದಲ್ಲಿ ಹಲವು ಬೆಳಗಾವಿ ಜಿಲ್ಲೆಯಲ್ಲಿ ಗದ್ದಲ, ಗಲಾಟೆ ನಡೆದಿವೆ. ಆದರೀಗ ಎಂಇಎಸ್ ಸಂಘಟನೆಯಾಗಿ ಬೆಳಗಾವಿ ಯಲ್ಲಿದ್ದರೂ, ರಾಜಕೀಯ ಶಕ್ತಿ ಅದರಲ್ಲಿಯೂ ಜನಮತದ ಮೂಲಕ ಆಯ್ಕೆಯಾಗುವ ಶಕ್ತಿ ಕುಂದುತ್ತಿರುವುದು ಕನ್ನಡಿಗರ ಪಾಲಿಗೆ ಸ್ವಾಗತಾರ್ಹ. ಜನಪ್ರತಿನಿಽಯಾಗಿ ಆಯ್ಕೆಯಾದ ಬಳಿಕ ಅವರಿಗೆ ಸಿಗುವ ಶಿಷ್ಠಾಚಾರವನ್ನು ಬಳಸಿಕೊಂಡು, ಹಲವು ಬಾರಿ ಎಂಇಎಸ್‌ನ ಕಾರ್ಯಕರ್ತರು ಕನ್ನಡದ ವಿರುದ್ಧ ಮಾತನಾಡಿದ್ದಾರೆ.
ಈಗ ಸೋತಿರುವ ಮಾತ್ರಕ್ಕೆ, ಅವರ ಪುಂಡಾಟಿಕೆ ನಿಲ್ಲುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸಾರ್ವಜನಿಕರು ಈಗ ಕನ್ನಡದ ಅಸ್ಮಿತೆಗೆ ಮಹತ್ವ ಕೊಟ್ಟಿರು ವುದು ಉತ್ತಮ ಸಂಗತಿ. ಮುಂದಿನ ದಿನದಲ್ಲಿ ಸರಕಾರ, ಪುಂಡಾಟಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇನ್ನಷ್ಟು ಕ್ರಮವಹಿಸಬೇಕಿದೆ.