ಅದ್ಧೂರಿ ಬೇಡ, ಪರಿಸರ ಸ್ನೇಹಿ ಹಬ್ಬ ಆಚರಿಸೋಣ
ಇಂದಿನಿಂದ ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ. ಸಾಮಾನ್ಯವಾಗಿ ಯುವಕರೇ ಈ ಹಬ್ಬವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ.ಬಾಲಗಂಗಾಧರ ತಿಲಕರು ಪ್ರಾರಂಭಿಸಿದ ಸಾರ್ವಜನಿಕ ಗಣೇಶೋತ್ಸವವನ್ನು128ವರ್ಷಗಳಿಂದ ಗಣೇಶ ಮಂಡಳಿಗಳು ಒಂದು ಸಾಂಸ್ಕೃತಿಕ ಪರಂಪರೆ ಯಾಗಿ ಉಳಿಸಿಕೊಂಡು ಬಂದಿವೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಅದ್ಧೂರಿ ಉತ್ಸವವಾಗಿ ಮಾತ್ರ ಉಳಿದಿದೆ. ಹಾಗಾಗಿ ಗಣೇಶ ಮಂಡಳಿ ಗಳು ಉತ್ಸವಕ್ಕೆ ಮಾತ್ರ ಸೀಮಿತವೇ ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ. ರಾಜ್ಯದಲ್ಲೂ ಗಲ್ಲಿಗಲ್ಲಿಗಳಲ್ಲಿ ಗಣೇಶೋತ್ಸವ ಮಂಡಳಿಗಳು ಇವೆ. ಈ ಮಂಡಳಿಯ ಸದಸ್ಯರ ಪೈಕಿ ಬಹುಪಾಲು ಯುವಕರೇ ಇರುತ್ತಾರೆ.
ಇವರೆಲ್ಲರೂ ಮನಸ್ಸು ಮಾಡಿದರೆ ಸಮಾಜಕ್ಕೆ ಅದ್ವಿತೀಯವಾದ ಕೊಡುಗೆಯನ್ನು ಕೊಡಬಹುದು. ಕರೋನಾದ ಸಂಕಷ್ಟ ಕಾಲದಲ್ಲಿ ಈ ಮಂಡಳಿಗಳ ಸದಸ್ಯರು ಲಸಿಕಾ ಜಾಗೃತಿ, ಬೀದಿ ವ್ಯಾಪಾರಿಗಳಿಗೆ ನೆರವು, ಹಸಿದವರಿಗೆ ಅನ್ನ ನೀಡುವುದು, ದೇವಸ್ಥಾನಗಳ ಶುಚಿತ್ವ, ಧರ್ಮಶಿಕ್ಷಣ, ಮರಗಿಡಗಳನ್ನು ನೆಟ್ಟು ಪೋಷಿಸು ವುದು, ಬಡ ವಿದ್ಯಾರ್ಥಿಗಳಿಗೆ ನೆರವು, ರಕ್ತದಾನ ಶಿಬಿರ ಸೇರಿದಂತೆ ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿದರೆ ಈ ವರ್ಷದ ಗಣೇಶೋತ್ಸವ ಆಚರಣೆಗೆ ಒಂದು ಅರ್ಥ ಬಂದೀತು.
ಗಣೇಶ ಹಬ್ಬದ ಸಂದರ್ಭದಲ್ಲಿ ಆರ್ಕೆಸ್ಟ್ರಾ, ಸಭೆ, ಸಮಾರಂಭಗಳನ್ನು ಸರಕಾರ ಈಗಾಗಲೇ ನಿಷೇಧಿಸಿ ಆದೇಶ ಹೊರಡಿಸಿದೆ. ಇವುಗಳಿಗೆ ಖರ್ಚು ಮಾಡುವ ಅರ್ಧದಷ್ಟು ಹಣವನ್ನು ಸಾಮಾಜಿಕ ಕೆಲಸಗಳಿಗೆ ಖರ್ಚು ಮಾಡಲು ಗಣೇಶ ಮಂಡಳಿಗಳು ಈ ಬಾರಿ ಮನಸ್ಸು ಮಾಡಬೇಕಿದೆ. ಅಲ್ಲದೇ, ಈ ಬಾರಿ ಕೋವಿಡ್ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಪಾಲಿಸುವ ಜವಾ ಬ್ದಾರಿ ಕೂಡ ಗಣೇಶ ಮಂಡಳಿಗಳ ಮೇಲಿದೆ. ಮಾನವರ ಸಂತೋಷ, ನೆಮ್ಮದಿ, ಖುಷಿಗಾಗಿ ಸೃಷ್ಟಿ ಯಾದ ಹಬ್ಬಗಳು ಮಾನವನ ಕೆಡುಕಕ್ಕೆ ಬಳಕೆಯಾಗದಿರಲಿ. ಎಲ್ಲರೂ ಈ ಬಾರಿ ಪರಿಸರಸ್ನೇಹಿ ಗಣೇಶೋತ್ಸವವನ್ನು ಆಚರಿಸುವ ಮೂಲಕ ಆರೋಗ್ಯ ಸಮಾಜದ ನಿರ್ಮಾಣ ಮಾಡೋಣ. ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು.