ರಾಜಕೀಯ ಮೀರಿದ ಬದ್ದತೆ ಅಗತ್ಯ
ದೇಶಾದ್ಯಂತ ಬೆಲೆ ಏರಿಕೆ ಬಗ್ಗೆ ನಿತ್ಯ ಚರ್ಚೆ ನಡೆಯುತ್ತಿವೆ. ಆಡಳಿತ ಪಕ್ಷ ಬಿಜೆಪಿಯವರು ಕೇಂದ್ರ ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು, ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲಿಯೂ ಇದೇ ರೀತಿ ಬೆಲೆ ಏರಿಕೆ ಯಾಗಿತ್ತು ಎಂದರೆ, ಕಾಂಗ್ರೆಸ್‌ನವರು ಪ್ರಧಾನಿ ನರೇಂದ್ರ ಮೋದಿ, ಆರ್ಥ ಸಚಿವೆ ನಿರ್ಮಲಾ ಸೀತಾ ರಾಮನ್ ಅವರ ಕೆಟ್ಟ ಆರ್ಥಿಕ ನೀತಿಗಳಿಂದ ಬೆಲೆ ಏರಿಕೆಯಾಗುತ್ತಿದೆ. ಹಾಗೂ ಕೇಂದ್ರ ಸರಕಾರಕ್ಕೆ ಮಧ್ಯಮ ವರ್ಗದ ಮೇಲೆ ಕಾಳಜಿಯಿಲ್ಲ. ಆದ್ದರಿಂದ ಬೆಲೆ ಏರಿಕೆ ಹೆಚ್ಚಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ.
ಕರ್ನಾಟಕದಲ್ಲಿಯೂ ಕಾಂಗ್ರೆಸ್ ನಾಯಕರು ಸೋಮವಾರ ಕಲಾಪಕ್ಕೆ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಿಕೊಂಡು, ಪ್ರತಿಭಟನೆ ನಡೆಸುತ್ತಾ ಬಂದರು. ಪ್ರತಿಪಕ್ಷವಾಗಿ ಕಾಂಗ್ರೆಸ್ ನಾಯಕರು ಜನರ ಧ್ವನಿ ಯಾಗುತ್ತಿರುವುದು ಸರಿಯಾದ ಕ್ರಮ. ಆದರೆ ಈ ಬೆಲೆ ಏರಿಕೆಯನ್ನು ರಾಜಕೀಯ ನಾಯಕರು, ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ನೋಡುತ್ತಿದ್ದಾರೆ ಹೊರತು, ನಿಜವಾಗಿ ಆಗುತ್ತಿರುವ ಸಮಸ್ಯೆಯೇನು ಎನ್ನುವ ಬಗ್ಗೆ ಚರ್ಚಿಸುವ ಕೆಲಸವನ್ನು ಮಾಡುತ್ತಿಲ್ಲ. ಪ್ರತಿಪಕ್ಷ ಕಾಂಗ್ರೆಸ್ ಸದನದ ಹೊರಗೆ ಈ ರೀತಿ ಹೋರಾಟ ಮಾಡುವ ಬದಲು, ಕಲಾಪದಲ್ಲಿ ಬೆಲೆ ಏರಿಕೆಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಯಾವ ರೀತಿ ಕ್ರಮ ಕೈಗೊಂಡಿವೆ ಎನ್ನುವ ಬಗ್ಗೆ ಚರ್ಚಿಸುತ್ತಿಲ್ಲ.
ಇನ್ನು ಆಡಳಿತ ಪಕ್ಷದಲ್ಲಿರುವವರು, ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೂ ಬೆಲೆ ಏರಿಕೆಯಾಗಿತ್ತು ಎನ್ನುವ ಉಡಾಫೆ ಉತ್ತರ ನೀಡುವುದನ್ನು ನಿಲ್ಲಿಸಿ, ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಶತಕದ ಗಡಿ ದಾಟಿರುವ ಪೆಟ್ರೋಲ್ ದರದಿಂದ, ಪ್ರತಿಯೊಂದು ಸಾಮಗ್ರಿಯ ದರವೂ ಏರಿಕೆಯಾಗುತ್ತದೆ. ಆದ್ದರಿಂದ ಇದನ್ನು ತಡೆಯುವ ನಿಟ್ಟಿನಲ್ಲಿ ಸೆಸ್ ಇಳಿಸಲು ಸಾಧ್ಯವೇ ಎನ್ನುವ ಬಗ್ಗೆ ಚಿಂತನೆ ನಡೆಸ ಬೇಕು. ಜನ ಸಾಮಾನ್ಯರ ಸಮಸ್ಯೆಯನ್ನು ರಾಜಕೀಯ ಗೊಳಿಸುವುದಕ್ಕಿಂತ, ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕು.