ಅವಘಡಗಳ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ
ಬೆಂಗಳೂರಿನಲ್ಲಿ ಮಂಗಳವಾರ ಅಪಾರ್ಟ್‌ಮೆಂಟ್ ಒಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸಜೀವ ದಹನವಾಗಿರುವ ಘಟನೆ ನಡೆದಿದೆ. ಆದರೆ ಈಅವಘಡ ನಡೆದಾಗ, ಅಲ್ಲಿನ ಅಗ್ನಿ ಸುರಕ್ಷತೆಯ ಬಗ್ಗೆ ನೋಡಬೇಕಿದೆ. ಅಪಾರ್ಮ್‌ಮೆಂಟ್‌ನಲ್ಲಿದ್ದ ಅಗ್ನಿ ನಂದಕಗಳು ಈ ಅಗ್ನಿಯನ್ನು ಆರಿಸುವುದಕ್ಕೆ ಸಾಧ್ಯವಾಗಿಲ್ಲ. ಅಂದರೆ ಕಾಟಾಚಾರಕ್ಕೆ ಅಥವಾ ಕಾನೂನು ಪಾಲಿಸಬೇಕು ಎನ್ನುವ ಕಾರಣಕ್ಕೆ ನೆಪಕ್ಕೆ ಅಗ್ನಿ ನಂದಕಗಳನ್ನು ಇರಿಸಲಾಗಿರುತ್ತದೆ.
ಪ್ರತಿಯೊಂದು ಅಗ್ನಿ ದುರಂತ ನಡೆದಾಗಲೂ, ಸ್ಥಳೀಯ ಮಟ್ಟದಲ್ಲಿ ಅಗ್ನಿ ನಂದಕಗಳು ಇಲ್ಲದೇ ಇರುವುದರಿಂದ, ಅಗ್ನಿ ಕೆನ್ನಾಲಿಗೆ ಹೆಚ್ಚಾಗುತ್ತದೆ ಎನ್ನುವುದು ಸಾಮಾನ್ಯ ಸಂಗತಿ. ಅಗ್ನಿ ಅವಘಡದಲ್ಲಿ ಹೆಚ್ಚು ಅನಾಹುತವಾಗಲು ಮತ್ತೊಂದು ಕಾರಣವೆಂದರೆ ಅಗ್ನಿ ಶಾಮಕ ದಳ ಸ್ಥಳಕ್ಕೆ ಬರುವುದಕ್ಕೆ ತಡವಾಗುವುದು ಇಲ್ಲವೇ, ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೆ ಅಗ್ನಿ ಶಾಮಕ ವಾಹನ ಹೋಗಲು ಸಾಧ್ಯವಾಗದಷ್ಟು ಕಿರಿದಾದ ರಸ್ತೆಗಳಾಗಿರುವು ದಾಗಿರುತ್ತದೆ.
ಬೆಂಗಳೂರಿನ ಪ್ರಕರಣದಲ್ಲಿ ಅಗ್ನಿಶಾಮಕ ವಾಹನ ಸುಲಭವಾಗಿ ಅಪಾರ್ಟ್ಮೆಂಟ್ ತಲುಪುವುದಕ್ಕೆ ಸಾಧ್ಯವಾಗಿಲ್ಲ. ಬೆಂಕಿ ಹೆಚ್ಚಾದಷ್ಟು, ಅದರ ಶಾಖ ಹೆಚ್ಚಾಗು ತ್ತದೆ. ಇದರಿಂದ ಅಗ್ನಿ ನಂದಿಸುವುದಕ್ಕೂ ಭಾರಿ ಸಮಸ್ಯೆಯಾಗುತ್ತದೆ. ಆದ್ದರಿಂದ ಅಗ್ನಿ ಕಾಣಿಸಿಕೊಳ್ಳುತ್ತಿದ್ದಂತೆ, ಸಾಧ್ಯವಾದಷ್ಟು ಶೀಘ್ರದಲ್ಲಿ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸುದಕ್ಕೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು.2015ರ ಮಾಹಿತಿ ಪ್ರಕಾರ ಬಿಬಿಎಂಪಿ ವ್ಯಾಪ್ತಿ ಯಲ್ಲಿರುವ13.214ಕಟ್ಟಡ ಗಳಲ್ಲಿ ಬೆಂಕಿ ಸುರಕ್ಷತೆ ವ್ಯವಸ್ಥೆ ಇಲ್ಲ. ರಾಜ್ಯದ 14 ಸಾವಿರಕ್ಕೂ ಹೆಚ್ಚು ಕಟ್ಟಡಗಳಲ್ಲಿ ಬೆಂಕಿ ಸುರಕ್ಷತಾ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಬಯಲಿಗೆ ಬಂದಿದೆ.
ಆದ್ದರಿಂದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ರೂಪಿಸಿರುವ ಮಾರ್ಗಸೂಚಿಯನ್ನು ಪಾಲಿಸುವುದು ಕೇವಲ, ಕಟ್ಟಡ ನಿರ್ಮಾಣದ ಪರವಾನಗಿ ಪಡೆಯುವುದಕ್ಕೆ ಪಾಲಿಸುವ ಬದಲು, ಜನರ ರಕ್ಷಣೆಗೆ ಅಗತ್ಯವಿರುವಂತೆ ನೋಡಿಕೊಳ್ಳಬೇಕಿದೆ. ಸರಕಾರವೂ, ಕೇವಲ ಮಾರ್ಗಸೂಚಿಯನ್ನು ಹೊರಡಿಸದೇ, ಅದು ಎಷ್ಟರ ಮಟ್ಟಿಗೆ ಪಾಲನೆಯಾಗುತ್ತಿದೆ ಎನ್ನುವ ಬಗ್ಗೆಯೂ ನಿಗಾವಹಿಸಬೇಕು.