ಪಕ್ಷಾಂತರ ಪರ್ವ; ಪ್ರಜಾಪ್ರಭುತ್ವ ಆಶಯಕ್ಕೆ ಮಾರಕ
ರಾಜ್ಯದಲ್ಲಿ ಮತ್ತೆ ಪಕ್ಷಾಂತರ ಪರ್ವದ ಸದ್ದು ಕೇಳಿ ಬರುತ್ತಿದೆ. ಜನಾಭಿಪ್ರಾಯದ ನಿರ್ಧಾರದ ಮೇಲೆ ರಚಿತವಾಗಿರುವ ಸರಕಾರವನ್ನು ಕೆಡವಿ, ಮತ್ತೊಂದುಸರಕಾರ ರಚನೆ ಮಾಡುವುದು ಇತ್ತೀಚೆಗೆ ಚಾಳಿ ಆಗಿಬಿಟ್ಟಿದೆ. ಕಾಂಗ್ರೆಸ್‌ನ ಪಕ್ಷದ ಇಪ್ಪತ್ತು ಶಾಸಕರು ಬಿಜೆಪಿ ಸೇರಲು ಸಿದ್ಧರಾಗಿದ್ದು ಅವರನ್ನು ಬಲೆ ಹಾಕಿ ಸೆಳೆಯುವ ಕೆಲಸವನ್ನು ಸಚಿವ ಮುನಿರತ್ನ ಅವರಿಗೆ ವಹಿಸ ಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬಹಿರಂಗವಾಗಿಯೇ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಕೂಡ ಬಿಜೆಪಿಯ ಶಾಸಕರನ್ನು ಸೆಳೆಯಲು ಬಲೆ ಬೀಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೇ ಈ ರೀತಿ  ಬಹಿರಂಗವಾಗಿ ಶಾಸಕರನ್ನು ಹೈಜಾಕ್ ಮಾಡಲು ಇಳಿದರೆ, ಪ್ರಜಾಪ್ರಭುತ್ವದ ಮೌಲ್ಯಕ್ಕೆ ಚ್ಯುತಿ ಬಂದಂತೆ ಅಲ್ಲವೇ? ಯಾವುದೇ ವ್ಯಕ್ತಿ ಆ ಪಕ್ಷದ ತತ್ವ ಸಿದ್ಧಾಂತದ ಮೇಲೆ ಒಲವಿಟ್ಟು ಸೇರಬೇಕೇ ಹೊರತು ಅಧಿಕಾರದ ಹಂಬಲದಿಂದ ಅಲ್ಲ. ಕೇವಲ ಅಧಿಕಾರ ಸಿಗುತ್ತದೆ ಎಂಬ ಸ್ವಾರ್ಥದಿಂದ ಸೇರ್ಪಡೆಗೊಂಡರೆ ಅಂತಹವರು ನಿಜವಾಗಿಯೂ ಜನರ ಸೇವೆ ಮಾಡುತ್ತಾರೆಯೇ? ಎಂಬ ಪ್ರಶ್ನೆ ಮೂಡುವುದು ಸಹಜ. ಪಕ್ಷಾಂತರಗೊಂಡವರಿಗೆ ಪಕ್ಷಾಂತರಗೊಂಡ ಐದು ವರ್ಷಗಳ ನಂತರವಷ್ಟೇ ಅಧಿಕಾರ ದೊರಕುವಂತೆ ಕಾನೂನು ರೂಪಿಸಿದರೆ ಮಾತ್ರ ಪಕ್ಷಾಂತರ ಪಿಡುಗು ನಿಲ್ಲಲು ಸಾಧ್ಯ.
ಅಥವಾ ಐದು ವರ್ಷಗಳು ಪಕ್ಷದ ಸಿದ್ಧಾಂತ ಮತ್ತು ನಿಲುವಿಗೆ ಬದ್ಧರಾಗಿ ದುಡಿದ ನಂತರ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸುವಂತಾಗಬೇಕು. ಇಲ್ಲವಾದಲ್ಲಿ ಜನಾಭಿಪ್ರಾಯಕ್ಕೆ ಬೆಲೆ ಇಲ್ಲದಂತಾಗುತ್ತದೆ. ದೇಶಾದ್ಯಂತ ಪಕ್ಷಾಂತರ ತಡೆಗೆ ಒಂದು ಬಲವಾದ ಕಾನೂನು ತರದಿದ್ದರೆ ಆಪರೇಷನ್ ಕಮಲ, ಆಪರೇಷನ್ ಹಸ್ತದಂತಹ ಅನಿಷ್ಟ ಬೆಳವಣಿಗೆಗಳು ನಡೆಯುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವೇ ಒಂದು ಬಲವಾದ ಕಾನೂನು ರೂಪಿಸಲು ಮನಸ್ಸು ಮಾಡಬೇಕಿದೆ.