ಆರ್ಥಿಕ ಮೂಲಕ್ಕೆ ಹೊಡೆತ ಬೀಳುವ ಆತಂಕ
ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿರುವುದನ್ನು ತಡೆಯುವಂತೆ ಕೇಂದ್ರ ಸರಕಾರದ ಮೇಲೆ ಬಹುತೇಕ ಪ್ರತಿಪಕ್ಷಗಳು ಒತ್ತಡ ಹೇರುತ್ತಿವೆ. ಆದರೆ ಪೆಟ್ರೋಲ್, ಡಿಸೇಲ್ ದರ ಕಡಿತ ಗೊಳಿಸಲು ಜಿಎಸ್‌ಟಿಗೆ ಈ ಎರಡನ್ನು ಸೇರಿಸುವುದು ಒಂದೇ ಎಂದು ಆರ್ಥಿಕ ಇಲಾಖೆಅಧಿಕಾರಿಗಳು ಹೇಳು ತ್ತಿದ್ದಾರೆ.
ಶುಕ್ರವಾರ ನಡೆದ ಜಿಎಸ್‌ಟಿ ಸಭೆಯಲ್ಲಿ ಈ ಬಗ್ಗೆ ಕೇಂದ್ರ ಸರಕಾರ ಚರ್ಚಿಸಿದೆ. ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡಿಸೇಲ್ ತಂದರೆ ಈಗಿರುವ ಬೆಲೆಯಲ್ಲಿ ಭಾರಿ ಕಡಿತವಾಗಲಿದೆ ಎನ್ನುವ ಮಾತುಗಳನ್ನು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಆದರೆ ಜಿಎಸ್‌ಟಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದಾಗ ಎಲ್ಲ ರಾಜ್ಯಗಳು ವಿರೋಽಸಿವೆ. ಇದಕ್ಕೆ ಕಾರಣ ಪೆಟ್ರೋಲ್, ಡಿಸೇಲ್ ಮೇಲೆ ರಾಜ್ಯ ಸರಕಾರಗಳು ಹೇರುತ್ತಿರುವ ಸೆಸ್‌ನಿಂದಾಗಿ ಸರಕಾರ ಖಜಾನೆಗೆ ಕೋಟ್ಯಂತರ ರುಪಾಯಿ ಆದಾಯ ಬರುತ್ತಿದೆ. ಆದರೆ ಈಗ ಪೆಟ್ರೋಲ್, ಡಿಸೇಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ, ಈ ಆದಾಯ ಮೂಲವೇ ಕಡಿತವಾಗಲಿದೆ.
ಬೆಲೆ ಏರಿಕೆ, ಪೆಟ್ರೋಲ್, ಡಿಸೇಲ್ ದರ ಏರಿಕೆಯ ಬಗ್ಗೆ ಕೇಂದ್ರ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸುವ ಕಾಂಗ್ರೆಸ್ ಸೇರಿದಂತೆ ಬಹುತೇಕ ಪ್ರತಿಪಕ್ಷಗಳು, ದರ ಇಳಿಕೆಗೆ ಇರುವ ಆಯ್ಕೆಯನ್ನು ಒಪ್ಪುವುದಕ್ಕೆ ಮಾತ್ರ ಸಾಧ್ಯವಿಲ್ಲ. ಈಗಾಗಲೇ ಜಿಎಸ್‌ಟಿ ವ್ಯಾಪ್ತಿಯಿಂದ ಹಲವು ರಾಜ್ಯ ತೆರಿಗೆ ಕಡಿತವಾಗಿರುವುದರಿಂದ, ಹಣಕಾಸು ಮೂಲ ಬರಿದಾಗಿದೆ. ಆದ್ದರಿಂದ ಬೆಲೆ ಇಳಿಸಬೇಕು ಎಂದು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಪ್ರತಿಪಕ್ಷಗಳು, ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡಿಸೇಲ್ ತರುವುದಕ್ಕೆ ಒಪ್ಪುವುದಿಲ್ಲ. ಆದರೆ ತೈಲ ಬೆಲೆ ಏರಿಕೆ ವಿಷಯ ಮಾತ್ರ ರಾಜಕೀಯ ವಾಗ್ದಾಳಿ ನಡೆಸಲು ಒಂದು ವಿಷಯವಾಗಿಯೇ ಇರಲಿದೆ ಎನ್ನುವುದು ಸತ್ಯ.