ಕಟ್ಟಡ ಕುಸಿತ: ಬಿಗಿ ಕಾನೂನು ಜಾರಿಗೊಳ್ಳಲಿ
ಕಟ್ಟಡ ಕುಸಿತ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಕಳೆದ ಒಂದು ವಾರದಲ್ಲೇ ಬೆಂಗಳೂರಿನಲ್ಲಿ ಎರಡು ಕಟ್ಟಡಗಳು ಧರೆಗುರುಳಿವೆ. ಕಳೆದ ವರ್ಷವೂ ಧಾರವಾಡದಲ್ಲಿ ಒಂದು ಕಟ್ಟಡ ಉರುಳಿ ಅನೇಕ ಜನರ ಸಾವು ನೋವಿಗೆ ಕಾರಣವಾಗಿತ್ತು. ಬೆಂಗಳೂರಿನ ಒಂದು ಕಟ್ಟಡ ಬಿದ್ದಾಗ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೂ ಇವುಗಳನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ.
ಇಂಥ ಪ್ರಕರಣಗಳು ನಡೆದಾಗ ಮಾತ್ರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಥವಾ ಆಯಾ ಸ್ಥಳೀಯ ಆಡಳಿತಗಳು ಎಚ್ಚೆತ್ತುಕೊಂಡು ವರದಿ ಕೇಳುವುದು, ಸಮಿತಿ ರಚಿಸುವುದು, ನೋಟಿಸ್ ಜರಿಯಂತಹ ಕೆಲಸ ಗಳನ್ನು ಮಾಡುತ್ತದೆ. ಆದರೆ ಯಾವುದೇ ಕ್ರಮಗಳನ್ನು ಕೈಗೊಂಡಂತಹ ಉದಾರಣೆಗಳು ಇಲ್ಲ. ಇಂತಹ ಪ್ರಕ್ರಿಯೆಗಳು ಮತ್ತೆ ನೆನಪಾಗುವುದು ಮತ್ತೊಂದು ಕಟ್ಟಡ ಕುಸಿದಾಗಲೇ. ಬಿಬಿಎಂಪಿ ಪ್ರಕಾರ, ಬೆಂಗಳೂರಿನಲ್ಲಿ ದುಃಸ್ಥಿತಿಯಲ್ಲಿರುವ 178 ಕಟ್ಟಡಗಳನ್ನು 2019ರಲ್ಲಿ ಗುರುತಿಸಲಾಗಿತ್ತು. ಆದರೆ ಈವರೆಗೂ ಅವುಗಳ ಮಾಲೀಕರ ವಿರುದ್ಧ ಕ್ರಮವೂ ಇಲ್ಲ, ಅದರ ಮಾಹಿತಿಯೂ ಬಿಬಿಎಂಪಿ ಬಳಿ ಇಲ್ಲ.
ಕೇವಲ ನಿಯೋಜನೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ಮತ್ತೆ ಮತ್ತೆ ಬದಲಾಗುವ ಆಯಕಟ್ಟಿನ ಅಽಕಾರಿಗಳು, ಜನಪ್ರತಿನಿಽಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕಳಪೆ ಕಟ್ಟಡ ಕಟ್ಟಿದವರು ಬಚಾವಾಗುತ್ತಿ ದ್ದಾರೆ ಎಂದರೆ ತಪ್ಪಾಗಲಾರದು. ಪ್ರಸ್ತುತ ಪರಿಸ್ಥಿತಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದುಃಸ್ಥಿತಿ ಯಲ್ಲಿರುವ ಕಟ್ಟಡಗಳ ಮಾಲೀಕರಿಗೆ ಕಟ್ಟಡ ನೆಲಸಮ ಅಥವಾ ನವೀಕರಣಕ್ಕೆ ಸಂಬಂಽಸಿದಂತೆ ಮೊದಲು ಗಡುವು ನೀಡಬೇಕು.
ನಿಗದಿತ ಗಡುವಿನೊಳಗೆ ಮಾಲೀಕರು ಯಾವುದೇ ಕ್ರಮ ಕೈಗೊಳ್ಳದೇ ಹೋದಲ್ಲಿ, ಆಯಾ ಸ್ಥಳೀಯ ಆಡಳಿತ ಸಂಸ್ಥೆಗಳೇ ಮುಂದಾಗಿ ಇಂತಹ ಕಟ್ಟಡಗಳನ್ನು ನೆಲಸಮ ಮಾಡಬೇಕು. ಅದರ ಖರ್ಚನ್ನು ಆ ಕಟ್ಟಡಗಳ ಮಾಲೀಕರೇ ಭರಿಸುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಕಟ್ಟಡ ಕುಸಿತ ಪ್ರಕರಣಗಳು ನಿಯಂತ್ರಣಕ್ಕೆ ಬರಲು ಸಾಧ್ಯ. ಇಲ್ಲವಾದಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಪ್ರಾಣ ತೆರಬೇಕಾಗುತ್ತದೆ.