ಹಿಂದೂಗಳ ರಕ್ಷಣೆಗೆ ಕ್ರಮ ಅಗತ್ಯವೆ
ಕಾಶ್ಮೀರದಲ್ಲಿ ಪಂಡಿತರ ಮೇಲೆ ಹಲ್ಲೆಗಳು ಅವ್ಯಾಹತವಾಗಿ ನಡೆದಿದೆ. ಅಲ್ಲಿ ಪ್ರತಿನಿತ್ಯ ಹಿಂದೂಗಳನ್ನು ಗುರಿಯಾಗಿಸಿ ಹಿಂಸಾಚಾರ ನಡೆದಿದೆ. ಈ ಹಿನ್ನೆಲೆಯಲ್ಲಿ ಗೃಹಸಚಿವ ಅಮಿತ್ ಶಾ ಅವರು ದೇಶದಲ್ಲಿನ ಭದ್ರತಾ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ 370 ನೇ ವಿಧಿ ರದ್ದಾದ ಬಳಿಕ ಅಲ್ಲಿ ಸಹಜ ಸ್ಥಿತಿ ಮರಳುತ್ತಿದೆ ಎಂದು ಹೇಳಲಾಗುತ್ತಿತ್ತು. ಆದರೆ ಒಮ್ಮೆಲೇ ಅಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ನೋಡಿದರೆ ಎಲ್ಲೋ ಏನೋ ಸರಿಯಾಗಿಲ್ಲ ಎನಿಸುತ್ತದೆ. ಅದೇ ರೀತಿ ನಮ್ಮ ನೆರೆಹೊರೆಯ ದೇಶಗಳಲ್ಲೂ ಕೂಡ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಅವ್ಯಾಹತ ವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಪಾಕಿಸ್ತಾನದಲ್ಲಂತೂ ಸರಿಯೇ. ಆದರೆ ಇದೀಗ ಬಾಂಗ್ಲಾದೇಶದಲ್ಲೂ ಹಿಂದೂ ಗಳ ಮೇಲೆ ಹಲ್ಲೆಗಳಾಗುತ್ತಿರುವುದು ವಿಷಾದಕರ. ದುರ್ಗಾಪೂಜಾ ಪೆಂಡಾಲ್ ಒಂದರಲ್ಲಿ ಹನುಮಾನ್ ವಿಗ್ರಹದ ಅಡಿಯಲ್ಲಿ ಕುರಾನ್ ಇರಿಸಲಾಗಿದೆ ಎಂಬ ಸುದ್ದಿ ಹರಡಿ ಅದು ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿತ್ತು.
ಇದನ್ನೇ ನೆಪ ಮಾಡಿಕೊಂಡು ಅಲ್ಲಿನ ಬಹುಸಂಖ್ಯಾತರು ಹಿಂದೂಗಳ ಮೇಲೆ ಎಗ್ಗಿಲ್ಲದೆ ದೌರ್ಜನ್ಯ ನಡೆಸಿದ್ದಾರೆ. ಮತೀಯ ಸಾಮರಸ್ಯ ಮುಖ್ಯ, ಎಲ್ಲ ಕೋಮುಗಳ ಜನರೂ ಸಹಬಾಳ್ವೆ ನಡೆಸಬೇಕೆಂಬುದು ಸರಿಯೇ. ಆದರೆ ನೆರೆ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ದಾಳಿಗಳಾಗು ತ್ತಿರುವಾಗ ಮೂಕಪ್ರೇಕ್ಷಕರಾಗಿರುವುದು ಸರಿಯಲ್ಲ.370ನೇ ವಿಧಿ ರದ್ದಾದ ಸಂದರ್ಭದಲ್ಲಿ ಪಾಕಿಸ್ತಾನದಿಂದ ಹಿಂದೂಗಳು ಬಂದರೆ ಅವರಿಗೆ ಆಶ್ರಯ ಕೊಡಬೇಕೆಂಬ ನಿರ್ಧಾರಕ್ಕೆ ದೊಡ್ಡದಾಗಿ ಆಕ್ಷೇಪಗಳು ಕೇಳಿಬಂದವು. ಮುಸ್ಲಿಮರೇಕೆ ಬೇಡ, ಇದು ತಾರತಮ್ಯ ನೀತಿ ಎಂದೆಲ್ಲ ಟೀಕಿಸ ಲಾಯಿತು. ಆದರೆ ಈಗ ಕಾಶ್ಮೀರದಲ್ಲಿ ಹಾಗೂ ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹೀಗೆ ದಾಳಿ ನಡೆಯುತ್ತಿರುವಾಗ ಯಾರೂ ದನಿ ಎತ್ತುತ್ತಿಲ್ಲ.
ನಮ್ಮ ನೆರೆಯ ದೇಶಗಳಿಗೆ ನಾವು ಇತ್ತೀಚಿನ ಲಸಿಕೆ ಸೇರಿದಂತೆ ಸದಾ ನೆರವು ನೀಡುತ್ತೇವೆ. ಆದರೆ ಆ ಕಡೆಯಿಂದ ಇಂಥ ಸಂದರ್ಭಗಳಲ್ಲಿ ಸೂಕ್ತ ಸ್ಪಂದನೆ ಸಿಗಬೇಕಾಗುತ್ತದೆ. ಬಾಂಗ್ಲಾದೇಶದ 20 ಜಿಲ್ಲೆಗಳಿಗೆ ಈ ಹಿಂಸಾಚಾರ ಹಬ್ಬಿದೆ. ಹಿಂದೂಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆ ದೇಶದ ಪ್ರಧಾನಿ ಬಾಯುಪಚಾರಕ್ಕೆ ಹೇಳಿದರೆ ಸಾಲದು. ಅದನ್ನು ಕಾಯಾ ವಾಚಾ ಮನಸಾ ಪಾಲಿಸಬೇಕು. ನಮ್ಮ ಸರಕಾರವೂ ಕೂಡ ಈ ನಿಟ್ಟಿನಲ್ಲಿ ಅಲ್ಲಿನ ಸರಕಾರಕ್ಕೆ ಸೂಕ್ತ ಎಚ್ಚರಿಕೆ ಕೊಡಬೇಕು. ಹಿಂದೂಗಳ ರಕ್ಷಣೆಗೆ ಅಗತ್ಯ ಕ್ರಮಗಳು ತ್ವರಿತವಾಗಿ ಆಗಬೇಕು.