ಲಸಿಕೆ ಸಾಧನೆ, ಇನ್ನೂ ಇದೆ ವೇದನೆ
ಭಾರತವಿಂದು ಮತ್ತೊಂದು ವಿಶೇಷವಾದ ಸಾಧನೆ ಮಾಡಿದೆ. ಹೊಸ ಮೈಲುಗಲ್ಲು ಸ್ಥಾಪಿಸಿದೆ. ಅದೇ 100 ಕೋಟಿ ಡೋಸ್ ಲಸಿಕೆ ಹಾಕಿದ ಸಾಧನೆ. ಹಾಗೆನೋಡಿದರೆ ಲಸಿಕೆ ನೀಡಿಕೆಯಲ್ಲಿ ದೇಶದ ಸಾಧಿಸಬೇಕಾದುದ್ದು ಇನ್ನೂ ಬಹಳಷ್ಟಿದೆ. ಏಕೆಂದರೆ ಲಸಿಕೆ ವಿತರಣೆ ಯಲ್ಲಿ ಭಾರತ ವಿಶ್ವದಲ್ಲಿ ಇನ್ನೂ71ನೇ ಸ್ಥಾನ ದಲ್ಲಿದೆ. ಅಲ್ಲದೆ ಶೇ.21 ರಷ್ಟು ಕವರೇಜ್ ಮಾತ್ರ ಆಗಿದೆ. ಅಂದರೆ ನೂರು ಕೋಟಿಯಲ್ಲಿ 71 ಕೋಟಿ ಒಂದೇ ಡೋಸ್ ಪಡೆದವರು.
ಎರಡೂ ಡೋಸ್ ಪಡೆದವರ ಸಂಖ್ಯೆ ೨೧ ಕೋಟಿ ಮಾತ್ರ. ಹಾಗೆಂದು ಇಷ್ಟೇನಾ ಎಂದು ಮೂಗು ಮರಿಯುವ ಅಗತ್ಯವಿಲ್ಲ. ಮೊದಲನೇ ಸ್ಥಾನ, ನೂರಕ್ಕೆ ನೂರು ಲಸಿಕೆ ವಿತರಿಸಿದ ಸಾಧನೆ ಮಾಡಿದ ದೇಶಗಳನ್ನು ಭಾರತ ದೊಡನೆ ಹೋಲಿಸುವುದು ಸರಿಯಾಗಲಿಕ್ಕಿಲ್ಲ. ಏಕೆಂದರೆ ಅವೆಲ್ಲ ಬಹುತೇಕವಾಗಿ ಚಿಕ್ಕ ದೇಶಗಳು. ಜನಸಂಖ್ಯೆಯೂ ಕಡಿಮೆ. ಹೀಗಾಗಿ ಲಸಿಕೆ ನೀಡಿಕೆಯಲ್ಲಿ ಉತ್ತಮ ಸಾಧನೆ ತೋರುವುದು ಅವುಗಳಿಗೆ ಸುಲಭ. ಆದರೆ ಇದನ್ನೇ ನಾವು ದೊಡ್ಡ ಕಾರಣವಾಗಿ ಮಾಡಿಕೊಂಡು ಸಮಾಧಾನ ಪಡುವಂತೆಯೂ ಇಲ್ಲ. ಏಕೆಂದರೆ ನೆರೆಯ ಚೀನಾ ನಮಗಿಂತ ದೊಡ್ಡ ದೇಶ. ನಮಗಿಂತ ಅಧಿಕ ಜನಸಂಖ್ಯೆ ಹೊಂದಿದೆ ಆದರೆ ಅಲ್ಲಿ ನಮ್ಮ ದೇಶಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ.
105 ಕೋಟಿ ಅಥವಾ ಶೇ. 75 ರಷ್ಟು ನಾಗರಿಕರಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ. ನಾವು ಚೀನಾ ನಿದರ್ಶನವನ್ನೂ ನೋಡಬೇಕಾಗುತ್ತದೆ. ಆದರೆ ನಮ್ಮ ಹಾಗೂ ಚೀನಾ ನಡುವೆ ಸಾಕಷ್ಟು ವ್ಯತ್ಯಾಸ ಗಳಿರುವುದನ್ನೂ ಗಮನಿಸಬೇಕು. ನಮ್ಮದು ಪ್ರಜಾ ಪ್ರಭುತ್ವ ರಾಷ್ಟ್ರ. ಇಲ್ಲಿ ಮೊದಮೊದಲು ಲಸಿಕೆ ಹಾಕಿಸಿ ಕೊಳ್ಳುವ ವಿಷಯದಲ್ಲಿ ಪರ ವಿರೋಧ ಅಭಿಪಾಯ ಗಳಿದ್ದವು. ಲಸಿಕೆಯ ಕೊರತೆ, ಮೂಲಸೌಕರ್ಯದ ಕೊರತೆಯೂ ಇತ್ತು. ಇದರ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಲಭ್ಯತೆಯ ಸಮಸ್ಯೆ ಇತ್ತು. ಮೊದಲನೆಯ ಮತ್ತು ಎರಡನೇ ಡೋಸ್ ಲಸಿಕೆ ಪಡೆಯುವ ನಡುವಿನ ಅವಧಿಯ ಬಗೆಗಿನ ಗೊಂದಲವೂ ಒಂದು ಕಾರಣ. ಮೊದಲು 28 ನೇ ದಿನಕ್ಕೆ ಎರಡನೇ ಡೋಸ್ ಪಡೆಯಬೇಕು ಎಂದು ಹೇಳಲಾಯಿತು.
ಅನಂತರ ಆ ಅವಧಿಯನ್ನು ಆರು ವಾರಗಳಿಗೆ, ಮತ್ತೆ 12ರಿಂದ 15 ವಾರಕ್ಕೆ ಹೆಚ್ಚಿಸಲಾಯಿತು. ಎರಡನೇ ಡೋಸ್‌ಗೆ ಕಾಯುವಿಕೆಯ ಅವಧಿ ಹೆಚ್ಚಾದ ಕಾರಣ ಮೊದಲ ಡೋಸ್ ಮಾತ್ರ ಪಡೆದವರ ಸಂಖ್ಯೆ ಹೆಚ್ಚಾಗಿದೆ. ದೀರ್ಘಾವಧಿಯ ಅಂತರವಾದ ಕಾರಣ ಮರೆತುಹೊಗುವ, ಉದಾಸೀನ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಇವೆಲ್ಲ ಸಂಗತಿಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಇದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಬೇಕು.