ಎಲ್ಲ ವಿಷಯದಲ್ಲಿಯೂ ತಕರಾರು ಸಲ್ಲ
ಭಾರತ ರಾಜಕೀಯವನ್ನು ಗಮನಿಸಿದರೆ, ಪ್ರತಿ ಸರಕಾರದ ಅವಧಿಯಲ್ಲಿಯೂ ಆಡಳಿತ ಪಕ್ಷದ ಪ್ರತಿ ಹೆಜ್ಜೆಯನ್ನು ವಿರೋಧಿಸುವ ಪ್ರತಿಪಕ್ಷಗಳು ಇದ್ದೇ ಇವೆ. ಅದರಲ್ಲಿ ಹೊಸತು ಏನಿಲ್ಲ. ಆದರೆ ಕೆಲ ವರ್ಷಗಳಿಂದ ಈ ಸಂಸ್ಕೃತಿ ಭಾರಿ ಅಪಾಯಕಾರಿ ಎನ್ನುವ ಹಂತಕ್ಕೆ ಬಂದು ನಿಂತಿದೆ. ಈ ಹಿಂದೆ ಪ್ರತಿಪಕ್ಷಗಳುಸರಕಾ ರದ ನೀತಿ-ನಿಯಮಗಳನ್ನು ಟೀಕಿಸಿದರೂ, ದೇಶದ ಭದ್ರತೆ, ಆರೋಗ್ಯದ ವಿಷಯ ಬಂದಾಗ ಒಂದಾಗಿ ಹೋರಾಡಬೇಕು ಎನ್ನುವ ಮನಸ್ಥಿತಿಯಲ್ಲಿದ್ದವು.
ಆದರೀಗ, ಗಡಿ ವಿಷಯದಿಂದ ಹಿಡಿದು ಪ್ರತಿವಿಷಯದಲ್ಲಿಯೂ ಸರಕಾರದ ನಿರ್ಧಾರವನ್ನು ಅನುಮಾನದಿಂದ ನೋಡುವ ಕೆಲಸಕ್ಕೆ ಪ್ರತಿಪಕ್ಷಗಳು ನಿಂತಿವೆ. ಭಾರತದ ಸೈನಿಕರು ನಡೆಸಿದ ಸರ್ಜಿಕಲ್ ಸ್ಟ್ರೈಕ್‌ಗೆ ದಾಖಲೆ ಕೇಳುವುದು, ದೇಶದ ಅಖಂಡತೆಗೆ ಅಡ್ಡಿಯಾಗಬಹುದಾದ ವಿಚಾರದಲ್ಲಿ ಸರಕಾರದ ತೀರ್ಮಾನವನ್ನು ವಿರೋಧಿಸುವುದು ಹೀಗೆ ಹಲವು ರೀತಿಯಲ್ಲಿ ಸರಕಾರದ ನಿರ್ಧಾರವನ್ನು ಪ್ರಶ್ನಿಸಿದ್ದನ್ನು ನೋಡಿದ್ದೇವೆ. ಕರೋನಾ ಬಂದ ಬಳಿಕ, ಕರೋನಾ ನಿಯಂತ್ರಣ ದಲ್ಲಿ ಭಾರತ ಸರಕಾರ ಕೈಗೊಂಡ ನಿರ್ಧಾರದ ಬಗ್ಗೆ ಹಲವು ದೇಶಗಳು, ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದರೂ, ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ಮಾತ್ರ ಸರಕಾರದ ನಡೆಯನ್ನು ಟೀಕಿಸುತ್ತಲೇ ಬಂದವೂ.
ಇದಾದ ಬಳಿಕ ಲಸಿಕೆ ನೀಡಲು ಶುರು ಮಾಡಿದ ಬಳಿಕ, ಅದರಲ್ಲಿಯೂ ಕಲ್ಲು ಹುಡುಕುವ ಕೆಲಸಕ್ಕೆ ಪ್ರತಿ ಪಕ್ಷಗಳು ಮುಂದಾದವು. ಇಡೀ ವಿಶ್ವವೇ, ಕರೋನಾ ಲಸಿಕೆಯಿಂದ ಮಾತ್ರ ಕರೋನಾಕ್ಕೆ ಶಾಶ್ವತ ಪರಿಹಾರ ಎಂದರೂ, ಪ್ರತಿಪಕ್ಷ ನಾಯಕರು ಮಾತ್ರ, ಲಸಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಇದರಿಂದ ಅನೇಕರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದೂ ಇದೆ. ಈ ಅಪಸ್ವರ, ಅನುಮಾನದ ಮಾತಿಗಳು ಜನರ ಜೀವಕ್ಕೆ ಮಾರಕವಾಗುವ ಆತಂಕವೂ ಇತ್ತು. ಆದರೂ ಇದೆಲ್ಲವನ್ನು ಮೀರಿ ದೇಶದಲ್ಲಿ ನೂರು ಕೋಟಿ ಡೋಸ್ ಲಸಿಕೆ ನೀಡುವಲ್ಲಿ ಸರಕಾರ ಯಶಸ್ವಿಯಾಗಿದೆ. ಈ ಸಂಖ್ಯೆಯ ಮೇಲೆ ಕೆಲ ರಾಜಕಾರಣಿಗಳುಅನುಮಾನ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಅನುಮಾನದ ಹೇಳಿಕೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಚಿಕ್ಕದಾಗಿ ನೋಡುವಂತೆ ಮಾಡುತ್ತದೆ.
ರಚನಾತ್ಮಕ ಟೀಕೆ ಪ್ರಜಾಪ್ರಭು ತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳಿಗೆ ಇರುವ ಹಕ್ಕು. ಆದರೆ ಪ್ರತಿಪಕ್ಷದಲ್ಲಿದ್ದೇವೆ ಎನ್ನುವ ಕಾರಣಕ್ಕೆ, ಎಲ್ಲದರಲ್ಲೂ ಹುಳುಕನ್ನು ಹುಡುಕುವುದು ಸರಿಯಲ್ಲ.