ಅವಹೇಳನಕಾರಿ ಪದಪ್ರಯೋಗ ರಾಜಕೀಯದ ಬೌದ್ಧಿಕ ದಾರಿದ್ರ್ಯ
ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೂರೂ ಪ್ರಮುಖ ಪಕ್ಷಗಳ ಮುಖಂಡರು ಸಾರ್ವಜನಿಕ ಸಭೆಗಳಲ್ಲಿ ಮಾಡುತ್ತಿರುವ ಭಾಷಣಗಳನ್ನು ಗಮನಿಸಿದರೆ, ಇದೇನು ರಾಜಕೀಯ ಪ್ರಚಾರವೋ ಅಥವಾ ಬಿಂದಿಗೆ ನೀರಿಗಾಗಿ ನಡೆಯುತ್ತಿರುವ ಜಗಳವೋ ಎಂಬಂತಿದೆ.
ಡ್ರಗ್ಸ್ ವ್ಯಸನಿ, ಹುಚ್ಚ, ಅಯೋಗ್ಯ, ಜೋಕರ್, ಹೆಬ್ಬೆಟ್ಟು ಗಿರಾಕಿ ಎಂಬ ಪದಗಳು ಎಲ್ಲರ ಬಾಯಲ್ಲೂ ಉಚ್ಛಾರ ವಾಗುತ್ತಿವೆ. ಈ ರೀತಿ ಪರಸ್ಪರರ ಬಗ್ಗೆ ಅವಹೇಳನ ಕಾರಿ ಪದಪ್ರಯೋಗಗಳನ್ನು ಮಾಡುವುದು ರಾಜಕೀಯ ದಲ್ಲಿ ಈಗ ಸಹಜ ಎಂಬಂತಾಗಿರುವುದು ರಾಜ್ಯದ ರಾಜಕೀಯಕ್ಕೆ ಬಡಿದಿರುವ ಬೌದ್ಧಿಕ ದಾರಿದ್ರ್ಯವನ್ನು ಎತ್ತಿ ತೋರಿಸುವಂತಿದೆ. ಹಿಂದೆ ಹೊಸದಾಗಿ ಶಾಸಕರಾದವರು ಆವೇಶದಿಂದ ಇಂತಹ ಕೀಳುಮಟ್ಟದ ಭಾಷೆಯನ್ನು ಬಳಸಿದಾಗ, ಆಯಾ ಪಕ್ಷದ ಹಿರಿಯರು ಬುದ್ಧಿ ಹೇಳಿ ತಿದ್ದುತ್ತಿದ್ದರು.
ಅಟಲ್ ಬಿಹಾರಿ ವಾಜಪೇಯಿ ಅವರಂತಹ ಅತ್ಯುತ್ತಮ ಸಂಸದೀಯ ಪಟುಗಳು ಸಾರ್ವಜನಿಕ ಸಭೆಗಳಲ್ಲಿ ಮಾತನಾಡುತತಿದ್ದರೆ, ಅವರ ಆಕರ್ಷಕ ನುಡಿಗಟ್ಟುಗಳ ಭಾಷಣವನ್ನು ಕೇಳಲು ವಿರೋಧಿಗಳೂ ಬಂದು ಸೇರುತ್ತಿದ್ದರು. ವಿರೋಧಿಗಳನ್ನು ಎಷ್ಟೇ ಕಟುವಾಗಿ ಟೀಕಿಸಿದರೂ ಘನತೆ, ವ್ಯಂಗ್ಯ ಮತ್ತು ಕಾವ್ಯಾತ್ಮಕತೆ ಯಿಂದ ಕೂಡಿದ ಸಭ್ಯ ಭಾಷೆಯನ್ನೇ ಅವರು ಬಳಸುತ್ತಿದ್ದರು. ಆದರೆ ಈಗ ಯಾವ ಪಕ್ಷದಲ್ಲೂ ಅಂತಹ ನಾಯಕರು ಕಾಣುತ್ತಿಲ್ಲ. ಇಂದಿನ ಬಹುತೇಕ ರಾಜಕಾರಣಿಗಳು ಪಕ್ಷಭೇದವಿಲ್ಲದೆ ಅಭಿರುಚಿಹೀನ, ಕೀಳು ಮಟ್ಟದ ಭಾಷಾ ಪ್ರಯೋಗ ಮಾಡುವುದನ್ನೇ ದೊಡ್ಡಸ್ತಿಕೆ ಎಂದು ತಿಳಿದುಕೊಂಡಂತಿದೆ. ಚುನಾವಣೆಯ ಸಂದರ್ಭದಲ್ಲಿ ಆಡಳಿತಾರೂಢ ಪಕ್ಷವು ತನ್ನ ಸರಕಾರದ ಸಾಧನೆಗಳನ್ನು ಜನರ ಮುಂದಿಟ್ಟು ಮತ ಯಾಚಿಸುವುದು ಸಹಜವಾಗಿ ಆಗಬೇಕಾದ ಕೆಲಸ.
ಅದೇ ರೀತಿ ಪ್ರತಿಪಕ್ಷದ ನಾಯಕರು ಆಡಳಿತದ ಹುಳುಕುಗಳನ್ನು ಮತ್ತು ವೈಫಲ್ಯವನ್ನು ಎತ್ತಿ ತೋರಿಸಬೇಕು. ಅದನ್ನು ಬಿಟ್ಟು ನಾಯಕರ ವೈಯಕ್ತಿಕ ತೇಜೋ ವಧೆಯೇ ಚುನಾವಣಾ ಅಖಾಡದ ಮುಖ್ಯ ವಿಷಯ ಎನ್ನುವಂತಾಗಿರುವುದು ಶೋಚನೀಯ ಸಂಗತಿ. ಲಂಗುಲಗಾಮಿಲ್ಲದೆ, ಲಜ್ಜೆಯ ಲವಲೇಶವೂ ಇಲ್ಲದೆ ರಾಜಕಾರಣಿಗಳು ಹೀಗೆ ನಾಲಗೆ ಹರಿಬಿಡುವುದನ್ನು ಪ್ರeವಂತ ಮತದಾರರು ಸಹಿಸಿಕೊಳ್ಳಬಾರದು.