ಕರ್ನಾಟಕಕ್ಕೆ ಕರಾಳ ದಿನ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ದೇಶಕ್ಕೇ ದಿಗ್ಭ್ರಮೆ ಮೂಡಿಸಿದೆ. ಪುನೀತ್ ಅಗಲಿಕೆ ಕನ್ನಡ ಚಿತ್ರರಂಗಕ್ಕೆ, ಕನ್ನಡಕ್ಕೆ, ನಾಡುನುಡಿಗೆ ಭರಿಸಲಾಗದ ನಷ್ಟ. ಅವರ ನಿಧನ ದೊಡ್ಡ ಶೂನ್ಯವನ್ನೇ ಸೃಷ್ಟಿಸಿದೆ. ಈ ದಿನ ಕರ್ನಾಟಕದ ಪಾಲಿಗೆ ಕರಾಳ ದಿನ.
ನಟನಾ ಕೌಶಲದ ಜತೆ ಸರಳ-ಸಜ್ಜನಿಕೆಯ ನಡವಳಿಕೆಯಿಂದಲೂ ಪುನೀತ್ ಅವರು ಕನ್ನಡಿಗರ ಮನೆ ಮಗ ನಂತಿದ್ದರು. ಕರ್ನಾಟಕದ ಸಾಂಸ್ಕೃತಿಕ ಇತಿಹಾಸ ದಲ್ಲಿ ಡಾ.ರಾಜ್ ಕುಮಾರ್ ಹಾಗೂ ಅವರ ಕುಟುಂಬ ಸಲ್ಲಿಸಿದ ಸೇವೆ ಅಮರ ಅಧ್ಯಾಯ. ಅಂತಹ ಕುಟುಂಬದ ಕುಡಿ ಈಗ ಅಕಾಲಿಕ ಮೃತ್ಯುವಿಗೆ ತುತ್ತಾಗಿರು ವುದು ನಿಜಕ್ಕೂ ಅತ್ಯಂತ ಆಘಾತಕಾರಿ ಸಂಗತಿ. ಪುನೀತ್ ಅವರು ಚಿಕ್ಕ ವಯಸ್ಸಿನ ಅಪಾರ ಸಾಧನೆ ಮಾಡಿದ್ದರು. ನಾಡು-ನುಡಿ ಮತ್ತು ಸಮಾಜದ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಅವರನ್ನು ಕಳೆದುಕೊಂಡಿರುವುದರಿಂದ ಕನ್ನಡ ನಾಡು ಅಕ್ಷರಶಃ ಬಡವಾಗಿದೆ. ಜೀವನವನ್ನೇ ಚಿತ್ರರಂಗಕ್ಕೆ ಮುಡಿಪಾಗಿಟ್ಟ ಕುಟುಂಬದ ಕುಡಿ ಪುನೀತ್ ಅವರು ಸ್ನೇಹಜೀವಿ, ಸಾಮಾಜಿಕ ಕಳಕಳಿಯುಳ್ಳವರಾಗಿದ್ದರು.
ಪವರ್ ಸ್ಟಾರ್ ಆಗಿದ್ದರೂ ಯಾವುದೇ ಗರ್ವವಿಲ್ಲದೇ ಎಲ್ಲರೊಂದಿಗೆ ಬೆರೆಯುತ್ತಿದ್ದ ಪುನೀತ್, ತಮ್ಮ ತಂದೆ ಡಾ.ರಾಜ್ ಕುಮಾರ್ ಅವರಂತೆಯೇ ಸರಳತೆಯನ್ನು ಮೈಗೂಡಿಸಿಕೊಂಡಿದ್ದರು. ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಅವರ ಅಭಿನಯ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದ ಪುನೀತ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಆಶಿಸುವುದಷ್ಟೇ ನಮ್ಮ ಪಾಲಿಗೆ ಉಳಿದಿದೆ. ಶರಣರ ಸಾವು ಮರಣದಲ್ಲಿ ಕಾಣು ಎಂಬ ನಾಣ್ಣುಡಿ ಯಂತೆ ಮರಣವನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಈಗ ರಾಜ್ಯ ಸರಕಾರವು ಮುಂದಿನ ಎರಡು ದಿನಗಳ ಕಾಲ ಅಭಿಮಾನಿಗಳ ದರ್ಶನಕ್ಕಾಗಿ ಕಂಠೀರಣ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಿದೆ.
ಅಭಿಮಾನಿಗಳು ಶಾಂತಚಿತ್ತದಿಂದ ಅವರನ್ನು ಕಳಿಸಿಕೊಡಬೇಕಿದೆ. ಪುನೀತ್ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ನಮ್ಮೆಲ್ಲರ ಹೃದಯದಲ್ಲಿಚಿರಸ್ಥಾಯಿಯಾಗಿ ಉಳಿದಿದ್ದಾರೆ. ಹೋಗಿ ಬಾ… ಅಪ್ಪು….