ರಾಜ್ ಕುಟುಂಬದ ಬೆನ್ನಿಗೆ ನಿಂತ ಸಿಎಂ ಕಾರ್ಯ ಶ್ಲಾಘನೀಯ
ನಟ ಪುನೀತ್ ರಾಜ್‌ಕುಮಾರ್ ಅವರು ನಿಧನರಾದ ಕ್ಷಣದಿಂದ ಅಂತ್ಯ ಸಂಸ್ಕಾರ ಆಗುವವರೆಗೂ ರಾಜ್‌ಕುಮಾರ್ ಕುಟುಂಬದ ಸದಸ್ಯರ ಜತೆಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯ ಶ್ಲಾಘನೀಯ.
ಅಮೆರಿಕದಲ್ಲಿದ್ದ ಪುನೀತ್ ಪುತ್ರಿ ಧೃತಿ ಅವರನ್ನು ತವರಿಗೆ ಕರೆದುಕೊಂಡು ಬರಲು ತುರ್ತು ಕ್ರಮ ತೆಗೆದು ಕೊಳ್ಳುವಂತೆ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜತೆ ಶುಕ್ರವಾರವೇ ಬೊಮ್ಮಾಯಿ ಮಾತುಕತೆ ನಡೆಸಿದ್ದರು. ಅಲ್ಲದೆ, ಶನಿವಾರ ಮಧ್ಯಾಹ್ನ ದೆಹಲಿಗೆ ಬಂದಿಳಿದ ಅವರನ್ನು ಯಾವುದೇ ವಿಳಂಬ ಆಗದಂತೆ ವಿಶೇಷ ವಿಮಾನದಲ್ಲಿ ಕರೆದುಕೊಂಡು ಬರಲೂ ವ್ಯವಸ್ಥೆ ಮಾಡಿದ್ದರು. ಕಂಠೀರವ ಸ್ಟುಡಿಯೋದ ಆವರಣದಲ್ಲಿ ರಾಜ್‌ಕುಮಾರ್-ಪಾರ್ವತಮ್ಮ ರಾಜ್‌ಕುಮಾರ್ ಸಮಾಧಿಯ ಪಕ್ಕದಲ್ಲಿಯೇ ಪುನೀತ್ ಅಂತ್ಯಕ್ರಿಯೆ ಮಾಡಲು ಅವಕಾಶ ಕೊಟ್ಟದ್ದಂತೂ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಪುನೀತ್ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟಿದ್ದ ಕಂಠೀರವ ಕ್ರೀಡಾಂಗಣದಲ್ಲಿ ಸಂಪುಟದ ಕೆಲವು ಸಹೋದ್ಯೋಗಿಗಳೊಂದಿಗೆ ಶುಕ್ರವಾರ ತಡರಾತ್ರಿವರೆಗೂ ಬೊಮ್ಮಾಯಿ ಇದ್ದರು. ತಮ್ಮ ನೆಚ್ಚಿನ ನಟನನ್ನು ಕೊನೆಯದಾಗಿ ನೋಡಬೇಕೆಂಬ ಕಾತುರದಿಂದ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಅಭಿಮಾನಿಗಳು, ಗಣ್ಯರಿಗೆ ಪಾರ್ಥಿವ ಶರೀರದ ದರ್ಶನದ ವ್ಯವಸ್ಥೆ, ಅಂತ್ಯಕ್ರಿಯೆಗೂ ಮೊದಲು ನಡೆಯಲಿರುವ ಮೆರವಣಿಗೆ ಸೇರಿದಂತೆ ಒಟ್ಟು ಪೊಲೀಸ್ ಭದ್ರತೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಯವರೇ ಸ್ವತಃ ಸಂಪರ್ಕದಲ್ಲಿದ್ದರು.
ಭಾನುವಾರ ಮಧ್ಯಾಹ್ನವಾದರೂ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗದ ಕಾರಣ, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಂಪುಟದ ಸಹೋದ್ಯೋಗಿ ಗಳೊಂದಿಗೆ ಮತ್ತೊಮ್ಮೆ ಚರ್ಚಿಸಿ ಅಂತ್ಯಕ್ರಿಯೆ ಯನ್ನು ಭಾನುವಾರ ಬೆಳಗ್ಗೆ ನಡೆಸಲು ತೀರ್ಮಾನಿಸಿದ್ದು, ಅವರು ಜನರಿಗೆ ಮತ್ತು ರಾಜ್‌ಕುಮಾರ್ ಕುಟುಂಬಕ್ಕೆ ಕೊಟ್ಟ ಮಹಾಗೌರವ.
ಈ ಸಂದರ್ಭದಲ್ಲಿ ಜನರು ಸಂಯಮ, ಜವಾಬ್ದಾರಿಯಿಂದ ವರ್ತಿಸಬೇಕಾದರೆ ಅದಕ್ಕೆ ಸಿಎಂ ತೆಗೆದುಕೊಂಡ ನಿರ್ಧಾರಗಳೂ ಕಾರಣವೆಂದರೆ ತಪ್ಪಾಗಲಾರದು. ಅಭಿಮಾನಿಗಳು ಕೂಡ ಶಾಂತಿ, ಸ್ನೇಹದಿಂದ ಇರುವುದು ಕನ್ನಡಿಗರ ಸಂಸ್ಕೃತಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.