ಪ್ರಾಥಮಿಕ ಹಂತದಲ್ಲಿ ಕನ್ನಡದ ಕಲಿಕೆಗೆ ಒತ್ತು ನೀಡಲಿ
ರಾಜ್ಯಾದ್ಯಂತ ರಾಜ್ಯೋತ್ಸವದ ಸಂಭ್ರಮ ಮೊಳಗುತ್ತಿದೆ. ನಾಡು, ನುಡಿ ಕುರಿತು ಎಲ್ಲರಲ್ಲೂ ಪ್ರೀತಿ, ಅಭಿಮಾನ ಉಕ್ಕಿ ಹರಿಯತೊಡಗಿದೆ. ಸರಕಾರವೇಮುಂದಾಗಿ ದೊಡ್ಡ ಪ್ರಮಾಣದಲ್ಲಿ ‘ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮ, ೫ ಲಕ್ಷ ಕಂಠಗಳಲ್ಲಿ ಕನ್ನಡ ಗೀತೆ ಹಾಡುವ ಕಾರ್ಯಕ್ರಮವನ್ನು ಯಶಸ್ವಿ ಯಾಗಿಸಿದೆ.
ನಾಡು, ನುಡಿ ಕುರಿತು ಯುವ ಪೀಳಿಗೆಯಲ್ಲಿ ಪ್ರೀತಿ, ಅಭಿಮಾನ ಮೂಡಿಸಲು ಇದೆಲ್ಲ ಬೇಕೇ ಬೇಕು. ಆದರೆ ಮುಖ್ಯವಾಗಿ ಆಗಬೇಕಾದುದು ಪ್ರಾಥಮಿಕ ಹಂತದಲ್ಲಿ ಕನ್ನಡದ ಕಲಿಕೆ. ನೂತನ ಶಿಕ್ಷಣ ನೀತಿಯ ಅಂಗವಾಗಿ ಕೆಲವು ಎಂಜಿನಿಯರಿಂಗ್ ಕೋಸ್ ಗಳನ್ನು ಕನ್ನಡದಲ್ಲಿ ಬೋಧನೆ ಮಾಡಲು ಸರಕಾರ ಮುಂದಾ ಗಿರುವುದು ಸ್ವಾಗತಾರ್ಹ. ಮುಂದಿನ ವರ್ಷದಿಂದ ಪ್ರಾಥಮಿಕ ಹಂತದಲ್ಲಿ ಕೂಡ ಹೊಸ ಶಿಕ್ಷಣ ನೀತಿಯನ್ನು ಅಳವಡಿಸಲು ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.
ನೂತನ ಶಿಕ್ಷಣ ನೀತಿ ಅಡಿ ಮಾತೃಭಾಷೆ ಅಥವಾ ಪರಿಸರದ ಭಾಷೆಯಲ್ಲಿ ಕಲಿಕೆಗೆ ಒತ್ತು ನೀಡಲಾಗಿದ್ದರೂ ಅದಕ್ಕೆ ಕಾನೂನು ಅಥವಾ ಸಾಂವಿಧಾನಿಕ ಬೆಂಬಲ ವನ್ನು ಒದಗಿಸಿಲ್ಲ. ಕಲಿಕೆ ಮಾಧ್ಯಮ ಕುರಿತು೨೦೧೫ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಸಂವಿಧಾ ನಕ್ಕೆ ತಿದ್ದುಪಡಿ ತಂದು ಕಲಿಕೆಯಲ್ಲಿ ದೇಶಿಭಾಷೆಗಳಿಗೆ ಬಲ ತುಂಬುವ ಕೆಲಸವನ್ನು ಈ ಹಿಂದಿನ ಕೇಂದ್ರ ಸರಕಾರ ಮಾಡಬೇಕಿತ್ತು. ಎಲ್ಲ ರಾಜ್ಯ ಸರಕಾರ ಗಳು ಅದಕ್ಕಾಗಿ ಒತ್ತಾಯಿಸಬೇಕಿತ್ತು. ಇದಕ್ಕೆ ಸಾಕಷ್ಟು ಕಾಲಾವಕಾಶವೂ ಇತ್ತು. ಆದರೆ ಸರಕಾರಗಳಲ್ಲಿ ಭಾಷೆ ಕುರಿತು ಬದ್ಧತೆಯ ಕೊರತೆಯಿಂದ ಈಗಲೂ ಭಾಷೆ ಕುರಿತು ದ್ವಂದ್ವಗಳು ಮುಂದುವರಿದು, ನಾಡುನುಡಿ ಕುರಿತು ಅನಾದರ ಉಳ್ಳ ಹಿತಾಸಕ್ತಿಗಳು ಕೋರ್ಟ್ ಮೆಟ್ಟಿಲುಗಳನ್ನು ಹತ್ತುತ್ತಲೇ ಇವೆ.
ಕೋರ್ಟ್ ಮುಂದೆ ಸರಕಾರ ಬಾಗುತ್ತಲೇ ಇದೆ. ಇವೆಲ್ಲವುಗಳ ನಡುವೆ ನೂತನ ಶಿಕ್ಷಣ ನೀತಿಗೆ ಸರಕಾರ ಮುಂದಾಗುತ್ತಿದೆ. ಇದೆಲ್ಲ ಇರಲಿ, ಸರಕಾರವೇ ಮುಂದಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿರುವುದು ದುರಂತ. ಕನ್ನಡ ಮಾಧ್ಯಮ ಶಾಲೆಗಳಿಗೆ ಕೊಡುತ್ತಿರುವ ಕೊಡಲಿ ಪೆಟ್ಟು. ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದರ ಅರಿವು ಸರಕಾರಕ್ಕೆ ಇದ್ದರೂ ಆಂಗ್ಲ ಮಾಧ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಶಾಲೆಗಳಲ್ಲಿ ಕನ್ನಡ ಉಳಿಯದಿದ್ದರೆ ಕನ್ನಡ ಇನ್ನೆಲ್ಲಿ ಉಳಿಯಲು ಸಾಧ್ಯ? ಆಡುಭಾಷೆಯಾಗಿಯೇ ಕನ್ನಡದ ತಳ ಗಟ್ಟಿಗೊಳಿಸುವ ಕ್ರಮ ಕೈಗೊಳ್ಳುವ ಬದಲು ಅಬ್ಬರದ ಕಾರ್ಯಕ್ರಮಗಳನ್ನು ಒಂದು ದಿನದ ಮಟ್ಟಿಗೆ ಮಾಡಿ ಸುಮ್ಮನಾದರೆ ಏನು ಪ್ರಯೋಜನ? ಹಾಗಾಗಿ ಭಾಷೆಉಳಿವಿನ ಕುರಿತು ಕಾನೂನಿನ, ಸಾಂವಿಧಾನಿಕ ಬೆಂಬಲ ನೀಡುವ ಕ್ರಮಕ್ಕೆ ಸರಕಾರ ಮುಂದಾಗಬೇಕು. ಆಗ ನಮ್ಮ ಆಚರಣೆಗಳಿಗೆ ಅರ್ಥ ಬಂದೀತು.