ಪುನೀತ್ ಸಾಮಾಜಿಕ ಕಾರ್ಯ ಮುಂದುವರಿಯಲಿ
ಪುನೀತ್ ರಾಜ್‌ಕುಮಾರ್ ಅವರು ನಟನೆಯ ಜತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿ ವೃದ್ಧಾಶ್ರಮ, ಅನಾಥಾಶ್ರಮ, ಗೋಶಾಲೆ, ಶಿಕ್ಷಣ ಪ್ರಸಾರದ ಕೆಲಸಗಳಲ್ಲಿತೊಡಗುವ ಮೂಲಕ ನಿಜ ಜೀವನದಲ್ಲೂ ಹೀರೋ ಆಗಿದ್ದರು ಎಂಬ ಸುದ್ದಿ ಅವರ ಮರಣದ ನಂತರ ಪತ್ರಿಕೆ, ಟಿವಿಗಳಲ್ಲಿ ಭಿತ್ತರಗೊಂಡಿದೆ.
ಯಾವುದೇ ಪ್ರಚಾರ ಇಲ್ಲದೆ ಅವರು ಮಾಡಿರುವ ಇಂಥ ಸಮಾಜಮುಖಿ ಕೆಲಸಗಳು ಅನೇಕರಿಗೆ ಮಾದರಿಯ ದಾಗಿವೆ. ಪುನೀತ್ ನಿಧನದಿಂದ ಚಿತ್ರರಂಗದ ಜತೆಗೆ ಅವರು ಕೈಗೊಂಡಿದ್ದ ಅನೇಕ ಸಮಾಜಮುಖಿ ಕಾರ್ಯ ಗಳಿಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಅವರು ಶಿಕ್ಷಣದ ವೆಚ್ಚ ಭರಿಸುತ್ತಿದ್ದ 1800 ಮಕ್ಕಳ ಮುಂದಿನ ವಿದ್ಯಾಭ್ಯಾಸದ ಹೊಣೆಯನ್ನು ತಮಿಳು ಚಿತ್ರರಂಗದ ನಾಯಕ ನಟ ವಿಶಾಲ್ ವಹಿಸಿಕೊಂಡಿದ್ದು ಪುನೀತ್ ಮತ್ತು ವಿಶಾಲ್ ನಡುವಿನ ಸ್ನೇಹ ಸಂಬಂಧಕ್ಕೆ ಕೊಟ್ಟ ದೊಡ್ಡ ಗೌರವ. ಆದರೆ ಇನ್ನೂ ಅನೇಕ ಗೋಶಾಲೆಗಳು, ವೃದ್ಧಾಶ್ರಮಗಳು, ಅನಾಥಾಶ್ರಮಗಳನ್ನು ಪುನೀತ್ ಅವರು ನಡೆಸುತ್ತಿದ್ದರು.
ಈಗ ಅವುಗಳಿಗೆ ಆರ್ಥಿಕ ನೆರವು ನೀಡುವವರು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ. ಡಾ.ರಾಜ್‌ಕುಮಾರ್ ಅವರ ಕುಟುಂಬ ಹಾಗೂ ಅಭಿಮಾನಿಗಳು ಪುನೀತ್ ಅವರು ಪ್ರಾರಂಭಿಸಿದ ಜನೋಪಯೋಗಿ ಕೆಲಸಗಳನ್ನು ಮುಂದುವರಿಸುವ ಮೂಲಕ ಅವರ ಹೆಸರನ್ನು ಅಜರಾಮರ ಆಗಿಸುತ್ತಾರೆ ಎಂಬ ನಂಬಿಕೆ ಇದೆ.
ಸರಕಾರ ಮತ್ತು ಕೆಲವು ಸಂಘ ಸಂಸ್ಥೆಗಳು ಕೂಡ ಪುನೀತ್ ಸ್ಥಾಪಿಸಿರುವ ವೃದ್ಧಾಶ್ರಮ, ಅನಾಥಾಶ್ರಮಗಳನ್ನು ದತ್ತು ಪಡೆದು, ಮುಂದುವರಿಸುವ ಕೆಲಸ ಮಾಡಬೇಕಿದೆ. ಎಂಎನ್‌ಸಿ ಕಂಪನಿಗಳು ತಮ್ಮ ಸಿಎಸ್‌ಆರ್ ಫಂಡ್‌ನ್ನು ಪುನೀತ್ ಕಟ್ಟಿ ಬೆಳೆಸಿರುವ ಸಂಸ್ಥೆಗಾಗಿ ಖರ್ಚು ಮಾಡುವ ಮೂಲಕ ಸಾಮಾಜಿಕ ಕಾಳಜಿ ಮೆರೆಯ ಬೇಕಿದೆ. ಐಟಿ ದಾಳಿಗೆ ಸಿಲುಕಿ ನರಳುತ್ತಿರುವ ಕಪ್ಪು ಕುಳಗಳು ಕೂಡ ಸ್ವತಃ ಮುಂದೆ ಬಂದು ಪುನೀತ್ ಅವರ ಸಾಮಾಜಿಕ ಕೆಲಸಗಳನ್ನು ಮುಂದು ವರಿಸುವಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.