ಕಬ್ಬು ಬಾಕಿ ಪಾವತಿಗೆ ಕಟ್ಟುನಿಟ್ಟಿನ ಕ್ರಮ ಅಗತ್ಯ
ಕಳೆದ ವಾರದಿಂದ ಎಡೆ ಕಬ್ಬಿನ ಹಂಗಾಮಿಗೆ ಕಾರ್ಖಾನೆಗಳು ಸಿದ್ಧತೆಯಲ್ಲಿ ತೊಡಗಿವೆ. ರಾಜ್ಯದ 66 ಸಕ್ಕರೆ ಕಾರ್ಖಾನೆಗಳ ಪೈಕಿ ಬಾಗಲಕೋಟೆ 11, ವಿಜಯಪುರ 8, ಬೆಳಗಾವಿ 26, ಹಾವೇರಿ 4 ಸಕ್ಕರೆ ಕಾರ್ಖಾನೆಗಳು ಈಗಾಗಲೇ ಕಬ್ಬು ನುರಿಸಲು ಪ್ರಾರಂಭಿಸಿವೆ. ಆದರೆ ಕಳೆದ ಸಾಲಿನಲ್ಲಿ ರೈತರಿಗೆಪಾವತಿಸಬೇಕಾದ ಕಬ್ಬಿನ ಬಿಲ್‌ನ್ನು ಅನೇಕ ಕಾರ್ಖಾನೆಗಳು ಇನ್ನೂ ಪಾವತಿಸಿಲ್ಲ. ಬಾಕಿ ಬಿಲ್‌ಗೆ ಕೊಡ ಬೇಕಾದ ಬಡ್ಡಿಯೂ ರೈತರಿಗೆ ಪಾವತಿಯಾಗಿಲ್ಲ. 2020-21ನೇ ಸಾಲಿನಲ್ಲಿ ಸರಕಾರ ಘೋಷಿಸಿದ್ದ ಬೆಂಬಲ ಬೆಲೆಯನ್ವಯ 74 ಕೋಟಿ ರು. ರೈತರಿಗೆ ಪಾವತಿಯಾಗಿಲ್ಲ.
ಅಲ್ಲದೇ, ಸಕ್ಕರೆ ಕಾರ್ಖಾನೆಗಳು ಹೆಚ್ಚುವರಿ ಘೋಷಿಸಿದ ಬೆಲೆ ಸೇರಿ ಅಂದಾಜು 325 ಕೋಟಿ ರು. ಬಿಡುಗಡೆ ಯಾಗಬೇಕಿದೆ. ಮತ್ತೊಂದು ಕಡೆ, ಕಬ್ಬಿನ ಉಪ ಉತ್ಪನ್ನಗಳ ಮೇಲಿನ ಲಾಭಾಂಶವೂ ರೈತರಿಗೆ ಸಿಗುತ್ತಿಲ್ಲ. ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಬೆಂಬಲ ಬೆಲೆ ಇರುವ ಹಿನ್ನೆಲೆಯಲ್ಲಿ ನ್ಯಾಯಸಮ್ಮತ ಬೆಲೆ ಸಿಗದೇ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರೆಲ್ಲರೂ ಒಂದುಗೂಡಿ ಅಧಿಕಾರಿಗಳಿಂದ ಹಿಡಿದು ಮುಖ್ಯಮಂತ್ರಿ ಯವರೆಗೂ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಒಂದೇ ಬೆಳೆಯನ್ನು ನಂಬಿ ಬದುಕು ಸಾಗಿಸುತ್ತಿರುವ ಅನೇಕರ ಬದುಕು ದುಸ್ತರವಾಗಿದೆ. ಡೀಸೆಲ್ ಬೆಲೆ ಏರಿಕೆ ಯಿಂದ ಹೊಲದಲ್ಲಿ ಉಳುಮೆ ಮಾಡುವ ಯಂತ್ರೋ ಪಕರಣಗಳ ಬಾಡಿಗೆ ದರವೂ ಹೆಚ್ಚಾಗಿದೆ. ರಸ ಗೊಬ್ಬರ ಗಳ ಬೆಲೆ ಗಗನಕ್ಕೇರಿದೆ.
ರಾಜ್ಯದ ಕೆಲವು ಕಾರ್ಖಾನೆಗಳಲ್ಲಿ ಒಂದು ರೀತಿಯ ಸರ್ವಾಧಿಕಾರದ ಆಡಳಿತ ನಡೆಯುತ್ತಿದೆ. ವಿಶೇಷವಾಗಿ ಹಲವಾರು ಕಾರ್ಖಾನೆಗಳು ಶಾಸಕರು, ಸಚಿವರ ಒಡೆತನದಲ್ಲಿರುವುದರಿಂದ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಬ್ಬು ಕಳುಹಿಸಿದ 14 ದಿನಗಳಲ್ಲಿ ಹಣ ಪಾವತಿಸಬೇಕು ಎಂಬ ನಿಯಮವಿದ್ದರೂ, ತಿಂಗಳುಗಳೇ ಕಳೆದರೂ ಹಣ ಸಂದಾಯವಾಗುತ್ತಿಲ್ಲ. ಈ ಸಮಸ್ಯೆ ನೀಗಿಸಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈ ಗೊಳ್ಳುವ ಮೂಲಕ ಕಬ್ಬು ಬೆಳೆಗಾರರ ಬೆಂಬಲಕ್ಕೆ ನಿಲ್ಲಬೇಕಿದೆ.