ತುಟ್ಟಿ ಬದುಕು ನಿಯಂತ್ರಿಸಿ
ಕೇಂದ್ರ ಮತ್ತು ರಾಜ್ಯ ಸರಕಾರವು ಪೆಟ್ರೋಲ್, ಡೀಸೆಲ್ ಮೇಲಿನ ದರವನ್ನು ಕೊಂಚ ಮಟ್ಟಿಗೆ ಇಳಿಕೆ ಮಾಡಿದೆ. ಆದರೆ ಇದು ಏರಿಸಿ ಇಳಿಸಿದ್ದರಿಂದ ಗ್ರಾಹಕರಿಗೆ ಸಂತೋಷದ ಸಂಗತಿ ಎಂದು ಹೇಳಲಾಗದು. ಇನ್ನೊಂದೆಡೆ ಆಟೊ ಪ್ರಯಾಣ ದರ ಹೆಚ್ಚಳಕ್ಕೆ ಸರಕಾರ ಅಧಿಸೂಚನೆ ಹೊರಡಿಸಿದೆ.
ಜತೆಗೆ ಹೋಟೆಲಿನಲ್ಲಿ ಕಾಫಿ ಸೇರಿದಂತೆ ಆಹಾರ ಪದಾರ್ಥಗಳ ಬೆಲೆ ಹೆಚ್ಚು ಮಾಡಲು ಹೋಟೆಲುಗಳ ಸಂಘ ಸಲಹೆ ನೀಡಿದೆ. ಇವಿಷ್ಟೇ ಅಲ್ಲದೆ ಎಲ್ಲ ಪದಾರ್ಥ ಗಳೂ ವಿಪರೀತ ಎಂಬಂತೆ ಬೆಲೆ ಏರಿಕೆ ಕಂಡಿವೆ. ಇದರಿಂದ ಜನರ ಜೀವನ ಜರ್ಜರಿತಗೊಂಡಿದೆ. ಇದಕ್ಕೆ ಇಂಧನದ ಬೆಲೆ ಏರಿಕೆಯೇ ಮುಖ್ಯ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಈ ಬೆಲೆ ಏರಿಕೆಗೆ ಮೂಲ ಕಾರಣವಾದ ಇಂಧನದ ಬೆಲೆ ಈ ಮೊದಲಿನಂತೆಯೇ ಸರಕಾರದ ಅಡಿಯ ಇರುವಂತೆ, ಅಂದರೆ ಸಬ್ಸಿಡಿ ಕೊಡುವ ಮೂಲಕ ನಿಯಂತ್ರಿಸಿದರೆ ಇಂತಹ ಅಕಾಲಿಕ ಬೆಲೆ ಏರಿಕೆಯನ್ನು ತಡೆಗಟ್ಟಬಹುದಾಗಿದೆ.
ಕೋವಿಡ್ ಹೊಡೆತಕ್ಕೆ ಸಿಲುಕಿ ಉದ್ಯೋಗ ಕಳೆದುಕೊಂಡ ಜನರ ಬದುಕಿನ ಮೇಲೆ ಎಲ್ಲ ತರದ ಬೆಲೆ ಏರಿಕೆಗಳು ಎಲ್ಲ ರೀತಿಯಿಂದಲೂ ದುಷ್ಪರಿಣಾಮ ಬೀರುತ್ತಿದೆ. ಮಧ್ಯಮ ವರ್ಗದ ಜನರು ತಮ್ಮ ಜೀವನ ಪದ್ಧತಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಮಾಡಿಕೊಂಡಾದರೂ ಬದುಕಿಯಾರು, ಆದರೆ ಬಡ ಜನರ ಪರಿಸ್ಥಿತಿ ಬಗ್ಗೆ ಯೋಚಿಸಬೇಕಾದ ಅಗತ್ಯವಿದೆ.
2020ರ ಹಸಿವಿನ ಸೂಚ್ಯಂಕದಲ್ಲಿ 107 ದೇಶಗಳ ಪೈಕಿ 94ನೇ ಸ್ಥಾನದಲ್ಲಿದ್ದ ಭಾರತ, ಈ ವರ್ಷ 116 ದೇಶಗಳ ಪೈಕಿ 101ನೇ ಸ್ಥಾನ ಪಡೆದಿದೆ. ಇದಕ್ಕೆ ಬೆಲೆ ಏರಿಕೆಯೇ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಸರಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನಿಯಂತ್ರಣದ ತರಬೇಕಾದದ್ದು ಪ್ರಸ್ತುತ ಅಗತ್ಯ.