ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಲಿ
ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಕೇಂದ್ರ ಸರಕಾರವು ದೀಪಾವಳಿಯ ಉಡುಗೊರೆಯಾಗಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನುಕ್ರಮವಾಗಿ ೫ ರು. ಹಾಗೂ ೧೦ ರು. ಇಳಿಕೆ ಮಾಡಿದ್ದು ಸ್ವಾಗತಾರ್ಹ.
ಪೆಟ್ರೋಲ್‌ಗಿಂತ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ದುಪ್ಪಟ್ಟು ಕಡಿತಗೊಳಿಸಿರುವುದು ನಷ್ಟದಲ್ಲಿದ್ದ ಸಾರಿಗೆ ವಲಯವನ್ನು ಮೇಲೆತ್ತಿದಂತಾಗಿದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳು ಸಹ ಇಂಧನ ದರಗಳಲ್ಲಿ ಮತ್ತಷ್ಟೂ ಕಡಿತಗೊಳಿಸುವ ಮೂಲಕ ಉತ್ತಮ ಕಾರ್ಯ ಮಾಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಾಗುತ್ತಲೇ ಇರುವ ಈ ಹೊತ್ತಿನಲ್ಲಿ ತೈಲೋತ್ಪನ್ನಗಳ ಮೇಲಿನ ಎಕ್ಸೈಸ್ ಸುಂಕವನ್ನು ಕಡಿಮೆ ಮಾಡುವಂಥ ಪ್ರಮುಖ ನಿರ್ಧಾರ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶವ್ಯಾಪಿ ಪ್ರಶಂಶೆಗೆ ಪಾತ್ರರಾ ಗಿದ್ದಾರೆ. ಈ ಕ್ರಮ ಸಾಮಾನ್ಯ ಜನರಿಗೆ ಸಮಾಧಾನ ತರುವ ಜತೆಗೆ ಹಣದುಬ್ಬರವನ್ನೂ ಕಡಿಮೆ ಮಾಡಲಿದೆ.
ಕೇಂದ್ರ ಸರಕಾರದ ಈ ನಿರ್ಧಾರವು ಒಟ್ಟಾರೆ ದೇಶದ ಆರ್ಥಿಕ ಚಕ್ರವನ್ನು ಮತ್ತಷ್ಟು ಉತ್ತೇಜಿಸುವ ನಿರೀಕ್ಷೆಯಿದೆ. ತೈಲ ದರವು ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿನ ಕಚ್ಚಾ ತೈಲದ ಬೆಲೆಯ ನಿರ್ಧಾರವಾಗಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಅನಿವಾರ್ಯವಾಗಲೂಬಹುದು. ಈಗ ಬೆಲೆ ಇಳಿಕೆ ಮಾಡಿದ್ದು ಕಣ್ಣೊರೆಸುವ ತಂತ್ರ ಎಂದು ಆಗ ಪ್ರಧಾನಿ ಮೋದಿ ಮತ್ತವರ ಸಂಪುಟವನ್ನು ದೂರುವ ಬದಲು ಸಾರ್ವ ಜನಿಕರೇ ವಿದ್ಯುತ್ ಚಾಲಿತ ವಾಹನಗಳ ಬಳಕೆಯತ್ತ ಗಮನ ಕೊಡಬೇಕಿದೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರಕಾರ ವಿದ್ಯುತ್ ವಾಹನಗಳ ಖರೀದಿಗೆ ಸಬ್ಸಿಡಿ ನೀಡುತ್ತಿದೆ.
ಇದನ್ನು ಸಾರ್ವಜನಿಕರು ಬಳಕೆ ಮಾಡಿಕೊಳ್ಳುವ ಮೂಲಕ ಸರಕಾರ ಮತ್ತು ತಮ್ಮ ಮೇಲಿನ ಹೊರೆಯನ್ನು ಕಡಿಮೆ ಮಾಡುವತ್ತ ಗಮನ ಹರಿಸಬೇಕು. ತೈಲ ದರಗಳ ಏರಿಳಿತ ಅರ್ಥ ವ್ಯವಸ್ಥೆಯ ಸಾಮಾನ್ಯ ಪ್ರಕ್ರಿಯೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಭವಿಷ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಒಗ್ಗಿಕೊಳ್ಳಬೇಕು.