ಮಳೆಯಿಂದ ಬೆಳೆ ಹಾನಿ: ಕೂಡಲೇ ಪರಿಹಾರ ನೀಡಿ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಕಳದ ನಾಲ್ಕು ದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕೊಯ್ಲಿಗೆ ಬಂದಿದ್ದ ನೂರಾರು ಎಕರೆ ಬೆಳೆ ತೀವ್ರವಾಗಿ ಹಾನಿಗೊಳಗಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಈ ಅಕಾಲಿಕ ಮಳೆಯಿಂದ ಕೃಷಿ ಚಟುವಟಿಕೆಗಳ ಮೇಲೆ ತೀವ್ರ ತರಹದ ವ್ಯತಿರಿಕ್ತ ಪರಿಣಾಮಗಳು ಉಂಟಾ ಗಿದೆ. ಬೆಳೆ ಹಾನಿಯನ್ನು ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕಾಗಿರುವುದು ತಕ್ಷಣಕ್ಕೆ ಆಗಬೇಕಿರುವ ಕೆಲಸ. ರಾಜ್ಯದಲ್ಲಿ ಬಿತ್ತನೆಯಾಗಿರುವ ಬೆಳೆಗಳ ಕುರಿತು ನಿಖರ ಮಾಹಿತಿಯನ್ನು ಕಲೆಹಾಕಲು ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಇತ್ತೀಚೆಗೆ ಆಪ್‌ವೊಂದನ್ನು ಅಭಿವೃದ್ಧಿಪಡಿಸಿವೆ. ಆ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೆ ತಂದಿದ್ದರೆ ಕೃಷಿ ಇಲಾಖೆಯ ಬಳಿ ಈಗ ಬಿತ್ತನೆಯಾದ ಪ್ರಮಾಣ ಹಾಗೂ ಮಳೆಯಿಂದ ಹಾನಿಯಾದ ಬೆಳೆಯ ಪ್ರಮಾಣದ ನಿಖರ ಲೆಕ್ಕಾಚಾರ ಇರುತ್ತಿತ್ತು.
ಇದರಿಂದ ಪರಿಹಾರ ವಿತರಿಸುವ ಕೆಲಸ ವಿಳಂಬವಿಲ್ಲದೆ ನಡೆಯಲು ಸಾಧ್ಯವಿತ್ತು. ಆದರೆ, ಇಡೀ ಸರಕಾರವೇ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೋರಿದ ಉತ್ಸಾಹ ಇಂತಹ ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ತೋರದೇ ಇರುವುದು ಸರಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ. ಕೃಷಿ ಚಟುವಟಿಕೆಗಳ ಆರ್ಥಿಕ ಬಂಡಿ ನಿಂತ ನಿಂತಿರುವ ಈ ಹೊತ್ತಿನಲ್ಲಿ ಸರಕಾರ ಮೈಕೊಡವಿ ಎದ್ದು ನಿಲ್ಲುವ ಮೂಲಕ ರೈತ ಪರ ಸರಕಾರ ಎಂಬುದನ್ನು ಸಾಬೀತಪಡಿಸಬೇಕಿದೆ. ಕೂಡಲೇ ಮಳೆಯಿಂದ ಹಾನಿಗೊಳಗಾದ ಬೆಳೆಗಳ ಸಮೀಕ್ಷೆ ಕಾರ್ಯ ನಡೆಸಿ, ತ್ವರಿತಗತಿಯಲ್ಲಿ ಪರಿಹಾರದ ವ್ಯವಸ್ಥೆ ಮಾಡಬೇಕು.
ಕೊಯ್ಲು ಮಾಡಿದ -ಸಲು ಖರೀದಿಸಲು ಖರೀದಿ ಕೇಂದ್ರಗಳನ್ನೂ ಆದ್ಯತೆಯ ಮೇಲೆ ತೆರೆಯಬೇಕು. ಬೆಂಗಳೂರು ಸೇರಿದಂತೆ ರಾಜ್ಯದ ನಗರ ಪ್ರದೇಶಗಳಲ್ಲಿ ಮಳೆಯಿಂದ ಬಹುತೇಕ ರಸ್ತೆಗಳು ಓಡಾಡಲು ಆಗದಷ್ಟು ಹಾಳಾಗಿವೆ. ಅದರಲ್ಲೂ ರಾಜಧಾನಿಯಲ್ಲಿ ಸಂಚಾರ ಎನ್ನುವುದು ದುಸ್ತರವಾಗಿದೆ. ರಸ್ತೆಗಳ ಗುಂಡಿ ಮುಚ್ಚುವ ಕಾರ್ಯವನ್ನೂ ಬೇಗ ಮುಗಿಸಿ, ಸಂಚಾರ ದಟ್ಟಣೆಯನ್ನು ಹೋಗಲಾಡಿಸಬೇಕು. ಈ ದಿಸೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ಚುರುಕಿನಿಂದ ಕಾರ್ಯ ಪ್ರವೃತ್ತವಾಗುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಟಿ ಬೀಸಬೇಕು. ಸಂಕಟದ ಇಂತಹ ಸಮಯದಲ್ಲಿ ಜನರ ನೆರವಿಗೆ ನಿಲ್ಲಬೇಕಾದದ್ದು ಸರಕಾರದ ಆದ್ಯ ಕರ್ತವ್ಯವಾಗಬೇಕಿದೆ.