ಭಯವಲ್ಲ, ಭಾವನೆಗಳಿಗೆ ಸ್ಪಂದನೆ
ಕಳೆದ ಒಂದು ವರ್ಷದಿಂದ ದೇಶದಾದ್ಯಂತ ಹೋರಾಟ, ಪ್ರತಿಭಟನೆ, ಸಾವು-ನೋವುಗಳಿಗೆ ಕಾರಣವಾಗಿದ್ದ ಮೂರು ಕೃಷಿ ಕಾಯಿದೆಗಳನ್ನು ಕೇಂದ್ರ ಸರಕಾರರದ್ದುಪಡಿಸಲು ನಿರ್ಧರಿಸಿರುವುದನ್ನು ಇಡೀ ದೇಶವೇ ಸ್ವಾಗತಿಸುತ್ತಿದೆ. ಆದರೆ ಪ್ರತಿಪಕ್ಷಗಳು, ‘ಇದೊಂದು ಚುನಾವಣೆ ಗಿಮಿಕ್, ಮುಂಬರುವ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಈ ಮೂರು ಕೃಷಿ ಕಾಯಿದೆಗಳು ಮುಳುವಾಗಲಿವೆ ಎಂಬ ಭಯದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಈ ನಿರ್ಧಾರ ತೆಗೆದು ಕೊಂಡಿದ್ದಾರೆ’ ಎಂಬಂತೆ ಬಿಂಬಿಸುತ್ತಿದ್ದು, ಇದು ತಮ್ಮದೇ ಗೆಲುವು ಎಂಬಂತೆ ಸಂಭ್ರಮಿಸುತ್ತಿವೆ.
ನಿಜಕ್ಕೂ ಇದು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ. ಯಾವುದೇ ಒಣ ಪ್ರತಿಷ್ಠೆಗೆ ಒಳಗಾಗದೆ, ರೈತರ ಭಾವನೆಗಳಿಗೆ ಬೆಲೆ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ ಐತಿಹಾಸಿಕ ತೀರ್ಮಾನ ವನ್ನು ಈ ದೇಶದ ಪ್ರತಿಯೊಬ್ಬರೂ ಮುಕ್ತಕಂಠದಿಂದ ಹೊಗಳಬೇಕಿತ್ತು. ಸಂಪೂರ್ಣ ಬಹುಮತವಿರುವ ಕೇಂದ್ರ ಸರಕಾರವು ಈ ದೇಶದ ಪ್ರತಿಯೊಬ್ಬರ ಭಾವನೆಗೂ ಬೆಲೆ ನೀಡಿದೆ ಎಂಬುದಕ್ಕೆ ಹೆಮ್ಮೆ ಪಡಬೇಕಿತ್ತು. ಆದರೆ ಪ್ರತಿಪಕ್ಷಗಳು ಇದನ್ನು ಬಿಜೆಪಿಯ ಸೋಲು, ಕಾಂಗ್ರೆಸ್‌ನ ಗೆಲುವು ಎಂಬಂತೆ ಸಂಭ್ರಮಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.
ಕಾಂಗ್ರೆಸ್‌ನ ಈ ಗೆದ್ದೆತ್ತಿನ ಬಾಲ ಹಿಡಿಯುವ ಪ್ರವೃತ್ತಿಯನ್ನು ಇನ್ನಾದರೂ ನಿಲ್ಲಿಸಬೇಕಿದೆ. ವಾಸ್ತವವಾಗಿ ಪ್ರತಿಪಕ್ಷ ಸ್ಥಾನದಲ್ಲಿರುವ ಪಕ್ಷಗಳು ಕೃಷಿ ಕಾಯಿದೆಯಲ್ಲಿನ ಲೋಪ ದೋಷಗಳನ್ನು ಸರಕಾರದ ಗಮನಕ್ಕೆ ತಂದು, ತಿದ್ದುಪಡಿ ಮಾಡಿಸಬೇಕಿತ್ತು. ಕಾಯಿದೆಯಲ್ಲಿರುವ ಉತ್ತಮ ಅಂಶಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಬೇಕಿತ್ತು. ಆದರೆ ಇದ್ಯಾವುದನ್ನೂ ಮಾಡದ ಕಾಂಗ್ರೆಸ್, ಸದನದ ಒಳಗೂ ಹೊರಗೂ ಅಸಹಕಾರ ತೋರಿದ್ದು ನಮ್ಮ ಸಂಸದೀಯ ವ್ಯವಸ್ಥೆಗೆ ಅವಮಾನ. ಇರಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಮಾತೇ ಅಂತಿಮ ಎಂಬುದನ್ನು ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಕೇಂದ್ರ ಸರಕಾರವು ರೈತರ ಹಿತದೃಷ್ಟಿಯಿಂದ ಕಾಯಿದೆಗಳನ್ನು ವಾಪಸ್ ಪಡೆದಿದೆ. ರೈತರ ಭಾವನೆಗಳಿಗೆ ಬೆಲೆ ನೀಡಿದೆ ಎಂಬುದನ್ನು ಒಪ್ಪಬೇಕು.