ದೌರ್ಜನ್ಯದ ಪ್ರತಿಫಲವೇ ಅತಿವೃಷ್ಟಿ
ದೇಶದ ಅರ್ಧ ಭಾಗದಷ್ಟು ಭೂಪ್ರದೇಶದಲ್ಲಿ ಅಕಾಲಿಕ ಮಳೆ ಸುರಿಯುತ್ತಿದ್ದು, ರೈತರು ಬೆಳೆದ ಬೆಳೆಗಳು ಸಂಪೂರ್ಣ ಹಾಳಾಗಿವೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಜನ, ಜಾನುವಾರುಗಳ ಜೀವವೂ ಬಲಿಯಾಗಿವೆ. ಈ ಅಕಾಲಿಕ ಮಳೆಗೆ ಹವಾಮಾನ ವೈಪರೀತ್ಯ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ.ಆದರೆ ಈ ಅತಿವೃಷ್ಟಿ ಪರಿಸರದ ಮೇಲೆ ಆಗುತ್ತಿರುವ ಮನುಷ್ಯನ ದೌರ್ಜನ್ಯದ ಪ್ರತಿಫಲವಷ್ಟೇ.
ಬಹುತೇಕರಿಗೆ ಈ ಕುರಿತು ತಿಳಿವಳಿಕೆ ಇದ್ದಂತಿಲ್ಲ. ನಮ್ಮ ಪ್ರಕೃತಿ ರಕ್ಷಣೆ ನಮ್ಮ ಕೈಯಲ್ಲೇ ಇದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ರಸ್ತೆಯ ಇಕ್ಕೆಲ, ಬಯಲು ಪ್ರದೇಶ, ಸ್ಮಶಾನ ಜಾಗ ಮುಂತಾದ ಪ್ರದೇಶ ಗಳಲ್ಲಿ ಸಸಿಗಳನ್ನು ನೆಟ್ಟು ಮಣ್ಣಿನ ಸವಕಳಿ ತಡೆಯುವ ಕೆಲಸವಾಗಬೇಕಿದೆ. ವಿವಿಧ ಕಾರಣಗಳಿಗಾಗಿ ಮರ ಕಡಿಯುವುದು, ವನ್ಯಜೀವಿಗಳ ಬೇಟೆಯಾಡುವುದನ್ನು ತಡೆಯುವುದು, ಕೆರೆಗಳು ಮತ್ತು ಗೋಮಾಳಗಳನ್ನು ರಕ್ಷಿಸುವುದು, ರೈತರನ್ನು ಸಾವಯವ ಕೃಷಿಗೆ ಹೊರಳಲು ಪ್ರೇರೇಪಿಸುವುದು ಮತ್ತು ಪರಿಸರದ ಸಮಸ್ಯೆಗಳಲ್ಲಿ ಹೆಚ್ಚು ಹೆಚ್ಚು ಸಾಕ್ಷರರಾಗುವಂತೆ ಮಾಡಬೇಕಿರುವುದು ಇಂದಿನ ಪ್ರತಿಯೊಬ್ಬ ನಾಗರಿಕನಿಗೆ ಅವಶ್ಯಕ ಮಾತ್ರ ವಲ್ಲ, ಅನಿವಾರ್ಯವೂ ಆಗಿದೆ.
ಪರಿಸರದಲ್ಲಿ ಅರಣ್ಯ ಮತ್ತು ನದಿಗಳ ಪಾತ್ರವನ್ನು ಅರಿತುಕೊಂಡು, ಅವುಗಳ ರಕ್ಷಣೆಗೆ ಪಣ ತೊಡಬೇಕಿದೆ. ಕೃಷಿಯೆಂಬುದು ಹಲವು ಸಂಕೀರ್ಣಗಳ ಸರಪಳಿ ಯೊಂದಿಗೆ ಹೆಣೆದುಕೊಂಡಿದೆ. ಸಣ್ಣ ಸಣ್ಣ ಕೀಟಗಳು, ಹಕ್ಕಿ ಗಳು, ಪ್ರಾಣಿಗಳು ಸಹ ಯಶಸ್ವಿ ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಿಸರ್ಗದಲ್ಲಿ ಇವುಗಳ ಪರಸ್ಪರ ಸಂಬಂಧ ಅರಿಯದ ಹೊರತು ಕೃಷಿಯಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ರೈತರಲ್ಲದ ಸಮುದಾಯ ಕೂಡ ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಭಾವಿಸ ಬೇಕಿದೆ. ಆ ಹೊಣೆಗಾರಿಕೆಯನ್ನು ಕೇವಲ ರೈತ ಸಮುದಾಯ ಅಥವಾ ಸರಕಾರಿ ಇಲಾಖೆಗಳ ಜವಾಬ್ದಾರಿ ಎಂದು ಸಾಗಹಾಕುವ ಬದಲು, ಸ್ವತಃ ಪರಿಸರ ಉಳಿಸಿ, ಬೆಳೆಸಲು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.
ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳೂ ಜವಾಬ್ದಾರಿ ತೆಗೆದುಕೊಂಡು ರಾಜ್ಯದಲ್ಲಿ ನದಿ, ಕಾನನದ ರಕ್ಷಣೆಗೆ ನಿಲ್ಲಬೇಕಿದೆ. ಇಲ್ಲವಾದಲ್ಲಿ ಇಂತಹ ಪ್ರಕೃತಿ ವಿಕೋಪಗಳು ಮತ್ತೆ ಮತ್ತೆ ಸಂಭವಿಸುತ್ತವೆ.