ಬೆಂಗಳೂರಿಗೆ ಜಲದಿಗ್ಬಂಧನ ; ಶಾಶ್ವತ ಪರಿಹಾರ ಕಲ್ಪಿಸಿ
ಈ ಭಾರಿ ಮಳೆಗೆ ಇಡೀ ಬೆಂಗಳೂರು ನಗರಕ್ಕೆ ಜಲದಿಗ್ಬಂಧನವಾಗಿತ್ತು. ಒಂದು ವಾರಕ್ಕೂ ಹೆಚ್ಚು ಕಾಲ ಜನಜೀವನ ಅಸ್ತವ್ಯಸ್ತವಾಗಿತ್ತು. ಈಗಲೂ ಎಷ್ಟೋ ಕುಟುಂಬಗಳಿಗೆ ಮಳೆಯಿಂದಾದ ಹಾನಿಯಿಂದ ಸುಧಾರಿಸಿಕೊಳ್ಳಲು ಆಗುತ್ತಿಲ್ಲ.
ಪ್ರತಿ ಬಾರಿ ಮಳೆ ಬಂದಾಗಲೂ ಬೆಂಗಳೂರಿನ ಪರಿಸ್ಥಿತಿ ಈ ಬಾರಿ ಆಗಿರುವ ಪರಿಸ್ಥಿತಿಗಿಂತ ಹೊರತಾಗೇ ನಿರಲ್ಲ. ಅದಕ್ಕೆ ರಾಜಕಾಲುವೆ ಒತ್ತುವರಿಯೇ ಪ್ರಮುಖ ಕಾರಣ. ಅನೇಕ ಶ್ರೀಮಂತರು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿದ್ದು ಎಲ್ಲರಿಗೂ ಗೊತ್ತಿರುವ ಸತ್ಯವೇ. ಆದರೆ ಈಗ ಆ ಕಟ್ಟಡಗಳನ್ನು ತೆರವುಗೊಳಿಸುವುದು ಸರಕಾರಕ್ಕೇ ಸವಾಲಾಗಿದೆ. ಇನ್ನೊಂದೆಡೆ ಬಡವರ್ಗದ ಕುಟುಂಬಗಳು ಬೆಂಗಳೂರಿನ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವುದರಿಂದ ಪ್ರತಿ ಬಾರಿ ಮಳೆಹಾನಿಗೆ ತುತ್ತಾಗುತ್ತಿದ್ದಾರೆ.
ಇದಕ್ಕೂ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಈ ಹಿಂದಿನ ಎಲ್ಲ ಸರಕಾರಗಳೂ ವಿಫಲವಾಗಿವೆ. ಈಗ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವತಃ ಆಸಕ್ತಿ ವಹಿಸಿ, ಒತ್ತುವರಿ ಜಾಗದಲ್ಲಿ ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್‌ಗಳ ಮಾಲೀಕರಿಗೆ ನೋಟಿಸ್ ನೀಡಿ, ತೆರವು ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಅದು ಎಷ್ಟರಮಟ್ಟಿಗೆ ಜಾರಿಗೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಪ್ರತಿ ಬಾರಿ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿ, ಸಾಕಷ್ಟು ಆಸ್ತಿ ಪಾಸ್ತಿ ಹಾನಿಯಾದಾಗಲೇ ಈ ಅಕ್ರಮ ಅಪಾರ್ಟ್‌ಮೆಂಟ್‌ ಗಳ ನಿರ್ಮಾಣದ ಬಗ್ಗೆ ಚರ್ಚೆ ಶುರುವಾಗುತ್ತದೆ, ಮತ್ತೆ ಬಿಸಿಲು ಬಂದು ಸಾಮಾನ್ಯ ಸ್ಥಿತಿ ಸೃಷ್ಟಿಯಾಗುತ್ತಿದ್ದಂತೆ ಆ ವಿಷಯದ ಬಗೆಗಿನ ಚರ್ಚೆ ಸಮಾರೋಪವಾಗುತ್ತದೆ.
ಯಾರೊಬ್ಬರೂ ಹಠ ಹಿಡಿದು ಅಪಾರ್ಟ್‌ಮೆಂಟ್‌ಗಳ ತೆರವು ಕಾರ್ಯಕ್ಕೆ ಮುಂದಾಗುತ್ತಿಲ್ಲ. ರಾಜಕಾಲುವೆ ಮೀಸಲು ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್‌ಗಳನ್ನು ತೆರವು ಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು ಆದೇಶ ನೀಡಿದ್ದರೂ ಈವರೆಗೂ ಈ ಆದೇಶ ಪಾಲನೆಯಾಗಿಲ್ಲವೆಂದಾದರೆ ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆಯೇ ಎಂಬ ಗುಮಾನಿ ಮೂಡುವುದು ಸಹಜ. ಸಿಎಂ ಬೊಮ್ಮಾಯಿ ಅವರು ಅಂತಹ ಪ್ರಭಾವಿಗಳ ಒತ್ತಡಕ್ಕೆ ಒಳಗಾಗದೇ ಬೆಂಗಳೂರು ನಗರಕ್ಕೆ ಮಳೆಹಾನಿಯಿಂದ ಶಾಶ್ವತ ಪರಿಹಾರ ಕಲ್ಪಿಸುವ ಇಚ್ಛಾಶಕ್ತಿ ಪ್ರದರ್ಶಿಸಿಸಬೇಕಿದೆ. ಅಲ್ಲದೆ, ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡವರ್ಗದ ಜನರಿಗೆ ಸುರಕ್ಷಿತ ಸ್ಥಳಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬೇಕಿದೆ.