ಎಸಿಬಿ ದಾಳಿ ತಾರ್ಕಿಕ ಅಂತ್ಯ ಕಾಣಲಿ
ಕಳೆದೆರೆಡು ದಿನಗಳಿಂದ ಎಸಿಬಿ ದಾಳಿ ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿದ್ದು, ಎಸಿಬಿ ದಾಳಿಗೆ ತುತ್ತಾದ ಅಧಿಕಾರಿಗಳು ಮೇಲೆ ಮುಂದಿನ ಕ್ರಮಗಳೇನು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಲೋಕಾಯುಕ್ತ ಸೇರಿದಂತೆ ಅನೇಕ ಭ್ರಷ್ಟಾಚಾರ ಸಂಸ್ಥೆಗಳು ಅನೇಕ ಭ್ರಷ್ಟ ಅಧಿಕಾರಗಳ ಮೇಲೆ ದಾಳಿ ನಡೆಸಿ,ಅವರ ಅಸಂಖ್ಯಾತ ಸಂಪತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಈ ಹಿಂದಿನ ಯಾವುದೇ ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾದ ಉದಾಹರಣೆ ಯಿಲ್ಲ.
ಈಗ ಇಷ್ಟೊಂದು ಪ್ರಚಾರ ಪಡೆದುಕೊಳ್ಳುವ ದಾಳಿ ಪ್ರಕರಣಗಳು ಕೆಲವು ದಿನಗಳು ಕಳೆಯುತ್ತಿದ್ದಂತೆ ಕಣ್ಮರೆ ಯಾಗಿ ಹೋಗುತ್ತವೆ. ದಾಳಿಯಲ್ಲಿ ಸಿಕ್ಕಿಬಿದ್ದ ಅಧಿಕಾರಿಗಳು ರಾಜಾರೋಷವಾಗಿ ಮತ್ತೇ ತಮ್ಮ ಸೇವೆಯಲ್ಲಿ ಮುಂದುವರಿಯುತ್ತಾರೆ. ಎಂದಿನಂತೆ ತಮ್ಮ ಲಂಚಬಾಕತನವನ್ನು ಮುಂದುವರಿಸುತ್ತಾರೆ. ಈ ಹಿಂದೆ ದಾಳಿ ನಡೆಸಿದ ಅನೇಕ ಪ್ರಕರಣಗಳಲ್ಲಿ ಯಾವುದೇ ಆರೋಪಿಗೆ ಶಿಕ್ಷೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಅನೇಕ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಸರಕಾರಕ್ಕೆ ಲೋಕಾಯುಕ್ತ ಶೀಫಾರಸು ಮಾಡಿತ್ತು. ಆದರೆ, ಅದೆಲ್ಲವುದಕ್ಕೂ ಸರಕಾರ ಅನುಮತಿ ನೀಡದೆ ಖುಲಾಸೆ ಮಾಡುತ್ತಾ ಬಂದಿರುವುದನ್ನೂ ಯಾವುದೇ ಸರಕಾರವಿದ್ದಾಗಲೂ ಕಾಣಬಹುದು.
ಇದೀಗ ಎಸಿಬಿ ದಾಳಿ ಸದ್ದು ಮಾಡುತ್ತಿದ್ದು, ಸಂಪತ್ತಿನ ಗಣಿಯೆ ತೆರೆದುಕೊಳ್ಳುತ್ತಿದೆ. ಈಗ ರಾಜ್ಯದ ಜನತೆಯ ಮುಂದೆ ಹಿಂದಿನ ಪ್ರಕರಣಗಳಂತೆಯೇ ಈ ದಾಳಿ ಪ್ರಕರಣಗಳು ಕೂಡ ಕಣ್ಮರೆಯಾಗುತ್ತಾವೆಯೋ ಅಥವಾ ಆರೋಪಿಗಳಿಗೆ ಶಿಕ್ಷೆಯಾಗುವ, ಸೇವೆಯಿಂದ ಅಮಾನತು ಮಾಡುವಂತಹ ಯಾವುದೇ ಕಠಿಣ ಕ್ರಮ ಗಳಾಗುತ್ತವೆಯೋ ಎಂಬ ಅನುಮಾನವಿದೆ. ಈ ಅನುಮಾನಗಳನ್ನು ಬಗೆಹರಿಸಿ, ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಜವಾಬ್ದಾರಿ ಸರಕಾರದ ಮೇಲಿದೆ. ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವ ಮೂಲಕ ತಾನು ಭ್ರಷ್ಟಾಚಾರದ ವಿರುದ್ಧ ಎಂಬುದನ್ನು ಸಾಭೀತು ಮಾಡಬೇಕಿದೆ.
ಇಲ್ಲವಾದಲ್ಲಿ, ಎಸಿಬಿ ಎಂಬುದು ಕಾಲಕಾಲಕ್ಕೆ ಬಳಕೆ ಮಾಡಿಕೊಳ್ಳುವ ಒಂದು ಅಸವಷ್ಟಾಗಿ ಕಾಣಿಸಿಕೊಳ್ಳುತ್ತದೆ. ಎಸಿಬಿಗೆ ಈಗಾಗಲೇ ಹಲ್ಲು ಕಿತ್ತಿರುವ ಹಾವು ಎಂಬ ಆರೋಪವಿದ್ದು, ಆಪಾದಿತರಿಗೆ ಶಿಕ್ಷೆಯಾಗದ ಹೊರತು ಆ ಕಳಂಕ ದೂರವಾಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಎಸಿಬಿ ನಡೆಸಿರುವ ದಾಳಿಗೆ ಸೂಕ್ತ ಮನ್ನಣೆ ದೊರೆಯಬೇಕಾದರೆ ಭ್ರಷ್ಟರಿಗೆ ನಿಷ್ಠುರವಾದ ಶಿಕ್ಷೆಯಾಗಬೇಕಿದೆ. ಇದನ್ನು ಕೊಡಿಸುವ ನಿಟ್ಟಿನಲ್ಲಿ ಸರಕಾರ ದಿಟ್ಟ ಹೆಜ್ಜೆಯನ್ನಿಡಬೇಕಿದೆ.