ಎಸಿಬಿ ದಾಳಿ ಬೃಹನ್ನಾಟಕ
ಕಳೆದ ಬುಧವಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ರಾಜ್ಯದ 60 ಕಡೆ ಏಕಕಾಲದಲ್ಲಿ ದಾಳಿ ನಡೆಸಿ, 15 ಭ್ರಷ್ಟ ಅಧಿಕಾರಿಗಳ ನಿವಾಸದಲ್ಲಿ ಕೋಟಿ ಕೋಟಿ ಅಕ್ರಮ ಹಣ, ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆಯ ಜೇವರ್ಗಿಯ ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ಎಸ್.ಎಂ.ಬಿರಾದಾರ ಅವರ ಮನೆಯಲ್ಲಿರುವ ಪೈಪ್‌ವೊಂದರಲ್ಲಿ ಲಕ್ಷ ಲಕ್ಷ ಹಣ ಸಿಕ್ಕಿರುವುದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ಉಳಿದ ಅಧಿಕಾರಿಗಳೂ ಟಾಯ್ಲೆಟ್, ಹಾಸಿಗೆ, ಸೋಫಾದ ಕೆಳಗೆ ದುಡ್ಡು ಇಟ್ಟಿರುವುದನ್ನು ಟಿವಿಗಳಲ್ಲಿ ನೋಡಿದ ಜನತೆ ದಂಗಾಗಿದ್ದಾರೆ. ಈ ಎಲ್ಲ ಅಧಿಕಾರಿಗಳ ಬಳಿಯಿಂದ ಒಟ್ಟು 72.57 ಕೋಟಿ ರು. ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ. ಅಂದರೆ ಇದು ಅವರ ಆದಾಯಕ್ಕಿಂತ ಶೇ.879.53ರಷ್ಟು ಹೆಚ್ಚುವರಿ ಆಸ್ತಿ ಎನ್ನಲಾಗಿದೆ. ಎಸಿಬಿಅಧಿಕಾರಿಗಳ ಕಾರ್ಯ ಶ್ಲಾಘನೀಯ. ಆದರೆ ಇವರಿಗೆ ಶಿಕ್ಷೆಯಾಗುತ್ತದೆಯೇ ಎಂಬುದು ಈಗ ಜನರನ್ನು ಕಾಡುತ್ತಿರುವ ಪ್ರಶ್ನೆ. ಯಾಕೆಂದರೆ ಕಳೆದ 40ವರ್ಷಗಳಿಂದಲೂ ಈ ಬಗೆಯ ಅನೇಕ ದಾಳಿಗಳನ್ನು ಜನರಿಗೆ ನೋಡಿ ಸಾಕಾಗಿದೆ. ದಾಳಿಯಾದ ಯಾವ ಒಬ್ಬ ಅಧಿಕಾರಿಯನ್ನೂ ಈವರೆಗೆ ವಜಾ ಮಾಡಿಲ್ಲ, ಜೈಲಿಗೆ ಹಾಕಿಲ್ಲ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ. ಇಂತಹ ದಾಳಿಗಳಲ್ಲಿ ಸಿಕ್ಕ ಅಧಿಕಾರಿಗಳು ಲಂಚ ನೀಡಿ ಪುನಃ ಅದೇ ಕೆಲಸಕ್ಕೆ ಹಾಜರಾಗಿರುವ ಉದಾಹರಣೆಗಳು ಇವೆ.
ಇಲ್ಲವೇ, ನ್ಯಾಯಾಲಯದಲ್ಲಿ ಸಾಕ್ಷಿ ಕೊರತೆಯಿಂದ ಪ್ರಕರಣವೇ ಬಿದ್ದು ಹೋಗಿವೆ. ಹಾಗಾದರೆ ಈ ಸಿನಿಮೀಯ ರೀತಿ ದಾಳಿ ಏಕೆ? ಅವುಗಳನ್ನು ನಮ್ಮ ಮಾಧ್ಯಮಗಳು ವೈಭವೀಕರಿಸುವುದು ಏಕೆ? ಎಂಬುದೇ ಅರ್ಥವಾಗು ತ್ತಿಲ್ಲ. ಹಾಗೊಂದು ವೇಳೆ ಈ ಹಿಂದೆ ಹೀಗೆ ಎಸಿಬಿ, ಲೋಕಾಯುಕ್ತ ದಾಳಿಗೊಳಗಾದ ಅಽಕಾರಿಗಳಿಗೆ ಸೂಕ್ತ ಶಿಕ್ಷೆಯಾಗಿದ್ದರೆ ಅವರ ಪಟ್ಟಿ, ಅವರಿಗಾದ ಶಿಕ್ಷೆಯನ್ನು ಪ್ರಕಟಿಸಬೇಕಿತ್ತು. ಆದರೆ ಅಂತಹ ಯಾವುದೇ ಶಿಕ್ಷೆಯಾದ ಉದಾಹರಣೆಗಳು ಇಲ್ಲ. ಇದೆಲ್ಲವನ್ನೂ ನೋಡಿದರೆ ಇದೊಂದು ಬೃಹನ್ನಾಟಕದಂತೆ ಕಾಣುತ್ತದೆ. ತಪ್ಪಿತಸ್ಥ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾದರೆ ಮಾತ್ರ ಇಂತಹ ದಾಳಿಗಳಿಗೆ ಮಹತ್ವ ಬರುತ್ತದೆ. ಇಲ್ಲವಾದಲ್ಲಿ ಇಂತಹ ದಾಳಿಗಳಿಗೆ ಯಾವ ಅಧಿಕಾರಿಗಳೂ ಹೆದರುವುದಿಲ್ಲ, ಭ್ರಷ್ಟಾಚಾರಕ್ಕೆ ಪೂರ್ಣವಿರಾಮವೇ ಇಲ್ಲದಂತಾಗುತ್ತದೆ